
ಕಲಬುರಗಿ,ಆ.25: ಪಿಂಚಣಿಗಾಗಿ ಆಗ್ರಹಿಸಿ ಇದೇ ಆಗಸ್ಟ್ 29ರಂದು ಮೈಸೂರಿನ ಸುತ್ತೂರು ಮಠದಲ್ಲಿ 2006 ಪೂರ್ವದ ಕರ್ನಾಟಕ ರಾಜ್ಯ ಅನುದಾನಿತ ಶಾಲಾ, ಕಾಲೇಜುಗಳ ಪಿಂಚಣಿ ವಂಚಿತರ ರಾಜ್ಯ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಪಿಂಚಣಿ ವಂಚಿತರ ವೇದಿಕೆಯ ರಾಜ್ಯ ಗೌರವಾಧ್ಯಕ್ಷ ಪಿ.ಎಸ್. ಕೊಕಟನೂರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದಿಂದ 200 ಜನ ನೌಕರರು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಸುಮಾರು ಎರಡು ಸಾವಿರಕ್ಕೂ ಹೆಚ್ಚು ನೌಕರರು, ನಿವೃತ್ತ ನೌಕರರು ಪಾಲ್ಗೊಳ್ಳುವರು ಎಂದರು.
2006ರ ಪೂರ್ವದಲ್ಲಿ ಅನುದಾನಿತ ಶಾಲಾ, ಕಾಲೇಜುಗಳಲ್ಲಿ ನೇಮಕಗೊಂಡ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ನೌಕರರು ಯಾವುದೇ ಪಿಂಚಣಿ ಸೌಲಭ್ಯವನ್ನು ಹೊಂದಿಲ್ಲ. ಹಳೆಯ ಪಿಂಚಣಿಯೂ ಇಲ್ಲ, ಹೊಸ ಪಿಂಚಣಿಯೂ ಸಹ ಇಲ್ಲ. ಹೀಗಾಗಿ ಪಿಂಚಣಿ ಕೊಡುವಂತೆ ಒತ್ತಾಯಿಸಿ ಕಳೆದ 20 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಸುಮಾರು ಆರು ಜನ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರೂ ಸಹ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಹೋರಾಟದಲ್ಲಿ ಐವರು ಪ್ರಾಣ ಕಳೆದುಕೊಂಡರೂ ಸಹ ಸರ್ಕಾರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಅವರು ಆಕ್ರೋಶ ಹೊರಹಾಕಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿನ ಕಾಂಗ್ರೆಸ್ ಸರ್ಕಾರವು ಚುನಾವಣೆಯ ಸಂದರ್ಭದಲ್ಲಿ ಅನುದಾನಿತ ಶಾಲಾ, ಕಾಲೇಜುಗಳ ನೌಕರರಿಗೆ ಪಿಂಚಣಿ ಸೌಲಭ್ಯದ ಕುರಿತು ಪ್ರಣಾಳಿಕೆಯಲ್ಲಿ ಭರವಸೆ ಕೊಟ್ಟಿದ್ದರಿಂದ ಅವರಿಗೂ ಸಹ ಭೇಟಿಯಾಗಿ ಮನವಿ ಮಾಡಿದ್ದೇವೆ. ಮುಖ್ಯಮಂತ್ರಿಗಳು ಭರವಸೆ ನೀಡಿದ್ದು, ನಮಗೆ ಬೇಡಿಕೆ ಈಡೇರುವ ಭರವಸೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸಮಾವೇಶವು ಸುತ್ತೂರು ಮಠದ ರಾಜೇಂದ್ರ ಮಹಾಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಜರುಗಲಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಮಾವೇಶಕ್ಕೆ ಆಗಮಿಸಿ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಅವರು ಕೋರಿದರು. ಸುದ್ದಿಗೋಷ್ಠಿಯಲ್ಲಿ ಬಿ.ಜಿ. ಪಾಟೀಲ್, ಮರೆಪ್ಪ ಎಂ. ಬಸವಪಟ್ಟಣ್, ಚಂದ್ರಶೇಖರ್ ಗಾರಂಪಳ್ಳಿ, ಲಕ್ಷ್ಮೀಕಾಂತ್ ಚಾಗಿ ಮುಂತಾದವರು ಉಪಸ್ಥಿತರಿದ್ದರು.