ಮೈಸೂರಿಗೆ ಕೊಟ್ಟಂತೆ ಬೀದರ್‍ಗೂ ಫಿಲಂ ಸಿಟಿ ಕೊಡಿ

ಬೀದರ.ಮಾ.19: ದೇಶದ ಅನೇಕ ರಾಜ್ಯಗಳು ತಮ್ಮ ರಾಜ್ಯದಲ್ಲಿನ ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಪ್ರವಾಸಿ ತಾಣಗಳನ್ನು ನಿರ್ಮಿಸಿ ಪ್ರವಾಸೋಧ್ಯಮ ಇಲಾಖೆಯಿಂದಲೇ ಬಹಳಷ್ಟು ಆದಾಯ ಗಳಿಸುತ್ತಿವೆ. ಅದರಂತೆ ರಾಜ್ಯ ಸರ್ಕಾರ ಕೂಡ ಪ್ರವಾಸಿ ಸ್ಥಳಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿನ ಅನೇಕ ಪ್ರವಾಸಿ ತಾಣಗಳು ಅಳಿವಿನ ಅಂಚಿನಲ್ಲಿವೆ, ಅವುಗಳನ್ನು ಅಭಿವೃದ್ಧಿ ಪಡಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಅದರಂತೆಯೇ, ಕರ್ನಾಟಕದ ಕಿರೀಟ ಎಂದು ಕರೆಯಲಾಗುವ ಬೀದರ್ ಗೆ ತನ್ನದೆಯಾದ ಸ್ಥಾನಮಾನ, ಇತಿಹಾಸವಿದೆ. ಇಲ್ಲಿನÀ ಪ್ರವಾಸಿ ತಾಣಗಳನ್ನು ಸರ್ಕಾರ ಅಭಿವೃದ್ಧಿ ಪಡಿಸಬೇಕು.
ಬೀದರ್ ದಕ್ಷಿಣ ಕ್ಷೇತ್ರ ವ್ಯಾಪ್ತಿಯಲ್ಲಿ ಬಹಳಷ್ಟು ಐತಿಹಾಸಿಕ ಸ್ಥಳಗಳಿವೆ. ಇದು ಹೈದ್ರಾಬಾದ್ ಗೂ ಹತ್ತಿರವಾಗುತ್ತದೆ. ಸರ್ಕಾರ ಬೀದರ್ ನಲ್ಲಿನ ಐತಿಹಾಸಿಕ ಸ್ಥಳಗಳ ಅಭಿವೃದ್ಧಿಗೊಳಿಸುವ ಮೂಲಕ ಪ್ರವಾಸಿಗರನ್ನು ಸೆಳೆಯುವ ಕೆಲಸ ಮಾಡಬೇಕು. ಮೈಸೂರಿಗೆ ಕೊಟ್ಟಂತೆ ಬೀದರ್ ಗೂ ಫಿಲಂ ಸಿಟಿಯನ್ನು ಕೊಡಬೇಕು. ಕ್ಷೇತ್ರದಲ್ಲಿನ ವೀರಭದ್ರೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಪ್ರವಾಸೋಧ್ಯಮ ಇಲಾಖೆಯಿಂದ 3 ಕೋಟಿ ರೂ. ಅನುದಾನ ನೀಡಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮನವಿ ಮಾಡಿದರು.
ಏಪ್ರಿಲ್ ತಿಂಗಳಿನಲ್ಲಿ ಶಾಸಕ ಬಂಡೆಪ್ಪ ಖಾಶೆಂಪುರ್ ರವರ ಸಮಯ ತೆಗೆದುಕೊಂಡು ಪ್ರವಾಸೋಧ್ಯಮ, ಪುರಾತತ್ವ ಸೇರಿದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬೀದರ್ ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿನ ಪ್ರವಾಸೋಧ್ಯಮ ತಾಣಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳುವುದಾಗಿ ಸಚಿವ ಸಿ.ಪಿ ಯೋಗೇಶ್ವರವರು ಭರವಸೆ ನೀಡಿದರು.