ಮೈಸೂರಲ್ಲಿ ಮೊಳಗಿದ ಕಮಲ ಕಹಳೆ

ಮೈಸೂರು: ಮಾ.06:ಬಿಸಿಲ ತಾಪವನ್ನು ಲೆಕ್ಕಿಸದೇ ಸಾವಿರಾರು ಮಂದಿ ದಂಡೇ ನೆರೆದು ಕೇಸರಿ ಕಮಲದ ಕಹಳೆ ಊದುವ ಮೂಲಕ ಚುನಾವಣಾ ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡುವ ಮೂಲಕ ಅಪಾರ ಜನಸ್ತೋಮದ ನಡುವೆ ನಾಲ್ಕು ಕ್ಷೇತ್ರಗಳಲ್ಲಿಯೂ ಬಿಜೆಪಿ ಅಬ್ಬರದ ಪ್ರಚಾರ ಮೊಳಗಿತು.
ಎನ್‍ಆರ್‍ನಲ್ಲಿ ಕೇಸರಿ ಕಮಾಲು: ಬೆಳಿಗ್ಗೆ 11ಕ್ಕೆ ನಾಯ್ಡು ನಗರದಲ್ಲಿ ಗಿರಿಧರ್ ಆರಂಭಿಸಿರುವ ನೂತನ ಕಚೇರಿಯಲ್ಲಿ ಕೆ.ಎಸ್.ಈಶ್ವರಪ್ಪ, ಬಿ.ವೈ.ರಾಘವೇಂದ್ರ ಚಾಲನೆ ನೀಡಿದರು. ಬಳಿಕ ತೆರೆದ ವಾಹನದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದರಾದ ಬಿ.ವೈ.ರಾಘವೇಂದ್ರ, ಪ್ರತಾಪಸಿಂಹ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ, ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ಮಾಜಿ ಮೇಯರ್ ಸಂದೇಶ್ ಸ್ವಾಮಿ ಹಾಗೂ ಇತರರು ರೋಡ್ ಶೋನಲ್ಲಿ ಪಾಲ್ಗೊಂಡರು.
ನಾಯ್ಡು ನಗರದ ಬಸ್ ನಿಲ್ದಾಣದಿಂದ ಆರಂಭವಾದ ರೋಡ್ ಶೋ ಮೂಲಕ ಕುರಿಮಂಡಿ ವೃತ್ತ, ಗಾಯತ್ರಿ ರಾಮಮಂದಿರ ವೃತ್ತ, ರಾಜೇಂದ್ರ ನಗರದ ಮುಖ್ಯರಸ್ತೆ ಮೂಲಕ ರಾಜೇಂದ್ರ ನಗರದ ವೃತ್ತದಲ್ಲಿ ಮುಕ್ತಾಯವಾಯಿತು.
ಕ್ಯಾತಮಾರನಹಳ್ಳಿ ಹುಲಿಯಮ್ಮ ಮತ್ತು ಪೌರಕಾರ್ಮಿಕರ ಕಾಲೋನಿಗೆ ಭೇಟಿ ನೀಡಿದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕಾಲು ನೋವು ಮತ್ತು ಆಯಾಸಗೊಂಡು ರೋಡ್ ಶೋಗೆ ಗೈರುಹಾಜರಾದರು. ಕೆ.ಆರ್. ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವಿಶ್ರಾಂತಿಗೆ ತೆರಳಿದರು.
ನರಸಿಂಹರಾಜ ಕ್ಷೇತ್ರದ ಪ್ರಚಾರದಲ್ಲಿ ನಗರಪಾಲಿಕೆ ಸದಸ್ಯ ಎಂ.ಸತೀಶ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಿ.ಗಿರಿಧರ್ ಪರವಾಗಿ ಅಭಿಮಾನಿಗಳು ಭಿತ್ತಿಪತ್ರ ಪ್ರದರ್ಶಿಸಿ ಇವರಿಗೆ ಟಿಕೇಟ್ ನೀಡಬೇಕೆಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ನಗರಪಾಲಿಕೆ ಸದಸ್ಯ ಸಾತ್ವಿಕ್ ಸಂದೇಶ್, ಅಶ್ವಿನಿ ಶರತ್, ಮಾಜಿ ಮೇಯರ್ ಸಂದೇಶ್ ಸ್ವಾಮಿ, ಮುಖಂಡ ಭಾನುಪ್ರಕಾಶ್ ಸೇರಿ ಇನ್ನಿತರರು ಉಪಸ್ಥಿತರಿದ್ದರು.