ಮೈಸೂರಲ್ಲಿ ಮೊದಲ ಮಳೆ ಸಂಭ್ರಮ

ಸಂಜೆವಾಣಿ ನ್ಯೂಸ್
ಮೈಸೂರು.ಮೇ.04:- ಕಳೆದ ಮೂರು ತಿಂಗಳಿಂದ ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇದೀಗ ಬಿರುಗಾಳಿ ಸಹಿತ ಆನೆಕಲ್ಲು ಮಳೆಯಾಗಿದ್ದು, ಮೊದಲ ಮಳೆಗೆ ಮರ- ರೆಂಬೆ ಧರೆಗುರುಳಿದ್ದರೆ ಗ್ರಾಮೀಣ ಭಾಗದ ಜನರಲ್ಲಿ ಸಂತಸ ತರಿಸಿದೆ. ನಗರದ ಬಿಸಿಲಿನ ತಾಪಕ್ಕೆ ಮಳೆರಾಯ ತಂಪೆರೆದಿದ್ದಾನೆ.
ನಗರದ ಕಾಳಿದಾಸ ರಸ್ತೆಯಲ್ಲಿ ಕಾರುಗಳ ಮೇಲೆ ಮರದ ರಂಬೆಗಳು ಬಿದ್ದು ಹತ್ತಾರು ಕಾರುಗಳು ಜಖಂ ಆಗಿವೆ. ನಂಜುಮಳಿಗೆ ಸಮೀಪ ರೆಂಬೆ ಬಿದ್ದು ನಿಲ್ಲಿಸಿದ ಆಟೋ ಗಾಜು ಪುಡಿ ಪುಡಿಯಾಗಿದೆ. ಅಂತೆಯೇ ಕೆಆರ್ ಎಸ್ ಮುಖ್ಯ ರಸ್ತೆ ಸೇರಿ ಕಡೆಗಳಲ್ಲಿ ಮರ ಬಿದ್ದಿರುವುದು ಹಾಗೂ ಮರದ ರೆಂಬೆ ಬಿದ್ದಿರುವ ಬಗ್ಗೆ ವರದಿಯಾಗಿವೆ. ಹೀಗೆ ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಸುರಿದ ಭಾರಿ ಆನೆಕಲ್ಲು ಮಳೆ ಹಾಗೂ ಬಿರುಗಾಳಿಯಿಂದಾಗಿ ನಗರದ ಹಲವೆಡೆ ಹಲವು ಮರಗಳು ಧರೆಗುರುಳಿದಿದೆ. ವಿಷಯ ತಿಳಿದು ಅಲರ್ಟ್ ಆದ ಮಹಾನಗರ ಪಾಲಿಕೆ ಅಭಯ ತಂಡ ಮರಗಳ ತೆರವಿಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದೆ.
ಇನ್ನೂ ಅನೇಕ ಕಡೆಗಳಲ್ಲಿ ಬೇಸಿಗೆಯಲ್ಲಿ ಮೋರಿ ಚರಂಡಿ ತುಂಬಿಕೊಂಡಿದ್ದರಿಂದ ರಸ್ತೆಗಳಲ್ಲಿ ಮಂಡಿ ಉದ್ದ ನೀರು ನಿಂತು ಸಂಜೆ ಮನೆಗೆ ಹೋಗುವವರನ್ನು ಪರದಾಡುವಂತೆ ಮಾಡಿತು.
ಗ್ರಾಮೀಣರ ಮೊಗದಲ್ಲಿ ಮಂದಹಾಸ: ಇನ್ನೂ ಈ ವರ್ಷದ ಮೊದಲ ವರ್ಷಧಾರೆ ತಡವಾಗಿಯೂ ಭರ್ಜರಿಯಾಗಿ ಬಂದ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಜನರಲ್ಲಿ ಮಂದಹಾಸ ತರಿಸಿತು. ಕಳೆದ ನಾಲ್ಕೈದು ದಿನಗಳಿಂದ ಇನ್ನಿಲ್ಲದ ಬಿಸಿಲಿನಿಂದ ಕೃಷಿ ಚಟುವಟಿಕೆ ಸ್ಥಗಿತಗೊಳಿಸಿ ಹಸುಗಳ ಮೇವಿಗೂ ಆಹಾಹಾಕಾರ ಉಂಟಾಗಿತ್ತು. ಸದ್ಯ ಮೊದಲ ಮಳೆಗೆ ಕೊಂಚ ನಿಟ್ಟುಸಿರು ಬಿಟ್ಟಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಲಿ ಎಂಬುದನ್ನು ಎದುರು ನೋಡುತ್ತಿದ್ದಾರೆ.
ಇತ್ತ ಕಳೆದ ಹಲವು ತಿಂಗಳಿಂದ ಬಿಸಿಲಿನ ತಾಪಕ್ಕೆ ಪರದಾಡಿದ್ದ ನಗರ ಭಾಗದ ಜನತೆಗೆ ಮಳೆ ಬಿದ್ದು ತಂಪೆರೆದು ಕೊಂಚ ಖುಷಿ ಕೊಟ್ಟಿತು.