ಮೈಸೂರಲ್ಲಿ ಟಿಪ್ಪು ಪ್ರತಿಮೆಗೆ ಬಿಜೆಪಿ ವಿರೋಧ


ಬೆಂಗಳೂರು,ನ.೧೫- ಮೈಸೂರಿನಲ್ಲಿ ಟಿಪ್ಪು ಪ್ರತಿಮೆ ನಿರ್ಮಾಣಕ್ಕೆ ಅವಕಾಶ ಕೊಡಲ್ಲ, ಪ್ರತಿಮೆ ನಿರ್ಮಾಣಕ್ಕೆ ಬಿಜೆಪಿಯ ವಿರೋಧವಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣ ಹೇಳಿದರು.
ಬಳ್ಳಾರಿಯಲ್ಲಿ ಈ ತಿಂಗಳ ೨೦ ರಂದು ನಡೆಯಲಿರುವ ಎಸ್‌ಟಿ ಸಮಾವೇಶದ ಬಗ್ಗೆ ವಿವರ ನೀಡಲು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ ಟಿಪ್ಪು ಪ್ರತಿಮೆ ನಿರ್ಮಾಣಕ್ಕೆ ನಾವು ಬಿಡೋದಿಲ್ಲ. ಇದಕ್ಕೆ ಹೇಗೆ ಪ್ರತಿರೋಧ ಒಡ್ಡಬೇಕು ಎಂಬ ಬಗ್ಗೆ ಪಕ್ಷದ ಮಟ್ಟದಲ್ಲಿ ಚರ್ಚೆ ಮಾಡಿದ್ದೇವೆ ಎಂದರು.
ಪಕ್ಷದ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲುರವರ ಜತೆ ಸಭೆ ನಡೆಸಿ ಟಿಪ್ಪು ಪ್ರತಿಮೆ ನಿರ್ಮಾಣ ವಿರೋಧಿಸಿ ಪಕ್ಷ ಯಾವ ರೀತಿ ಹೆಜ್ಜೆ ಇಡಬೇಕು ಎಂಬ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಅವರು ಹೇಳಿದರು.
ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯುವುದಕ್ಕೆ ವಿಪಕ್ಷಗಳ ಆಕ್ಷೇಪಗಳಿಗೆ ಪ್ರತಿಕ್ರಿಯಿಸಿದ ಅವರು, ಕೇಸರಿ ಬಣ್ಣ ಬಳಿದರೆ ತಪ್ಪೇನು? ಕಾಂಗ್ರೆಸ್ ಕಾಮಾಲೆ ಕಣ್ಣಿನಲ್ಲಿ ಎಲ್ಲವನ್ನೂ ನೋಡುತ್ತಿದೆ. ಹಸಿರು ಬಣ್ಣ ಎಂದಾಕ್ಷಣ ನಾವು ಒಂದು ಧರ್ಮಕ್ಕೆ ಸೀಮಿತ ಮಾಡಿ ನೋಡೋದಿಲ್ಲ ಎಂದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಏನು ಮಾಡಿತ್ತು ಗೊತ್ತಿದೆ. ನಾವು ಶಾಲೆಗಳಿಗೆ ಕೇಸರಿ ಬಣ್ಣ ಮಾತ್ರ ಬಳಿಯೊಲ್ಲ, ೭೦ ಸಾವಿರ ಕೊಠಡಿಗಳನ್ನು ನಿರ್ಮಾಣ ಮಾಡುತ್ತೇವೆ. ಶಿಕ್ಷಕರ ನೇಮಕಾತಿಯನ್ನೂ ಸರ್ಕಾರ ಮಾಡಿದೆ ಎಂದರು.
ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿದರೆ, ಬಿಜೆಪಿಯಿಂದ ವರ್ತೂರು ಪ್ರಕಾಶ್ ಸ್ಪರ್ಧೆ ಬೇಡ ಎಂಬ ಪಕ್ಷದ ಕೆಲ ಮುಖಂಡರ ನಿಲುವಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೋಲಾರದಿಂದ ವರ್ತೂರು ಪ್ರಕಾಶ್‌ರವರನ್ನು ಕಣಕ್ಕಿಳಿಸುವುದಾಗಿ ಬಿಜೆಪಿ ಎಲ್ಲೂ ಹೇಳಿಲ್ಲ. ಚುನಾವಣೆ ಇನ್ನೂ ೪-೫ ತಿಂಗಳು ಇದೆ, ಆಗ ಪಕ್ಷ ಯಾರು ಸ್ಪರ್ಧೆ ಮಾಡಬೇಕೆನ್ನುವುದನ್ನು ತೀರ್ಮಾನಿಸುತ್ತೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.
ಎಸ್‌ಟಿ ಸಮಾವೇಶ
ಇದೇ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಎಸ್‌ಟಿ ಮೋರ್ಚಾ ಅಧ್ಯಕ್ಷ ತಿಪ್ಪರಾಜುಅವಲ್ದಾರ್ ಈ ತಿಂಗಳ ೨೦ ರಂದು ಬಳ್ಳಾರಿಯಲ್ಲಿ ಬೃಹತ್ ನವಶಕ್ತಿ ಸಮಾವೇಶವನ್ನು ಪಕ್ಷ ಆಯೋಜಿಸುತ್ತಿದೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಈ ಸಮಾವೇಶವನ್ನು ಉದ್ಘಾಟಿಸಲಿದ್ದು, ೧೦ ಲಕ್ಷಕ್ಕೂ ಹೆಚ್ಚು ಜನ ಈ ಸಮಾವೇಶದಲ್ಲಿ ಪಾಲ್ಗೊಳ್ಳುವರು ಎಂದರು.
ಎಸ್‌ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳದ ವಿಜಯೋತ್ಸವವನ್ನು ಈ ಸಮಾವೇಶದ ಮೂಲಕ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡೀಯೂರಪ್ಪ, ರಾಷ್ಟ್ರೀಯ ನಾಯಕರಾದ ಅರ್ಜುನ್‌ಮುಂಡಾ ಸೇರಿದಂತೆ ಹಲವು ನಾಯಕರುಗಳು ಈ ಸಮಾವೇಶದಲ್ಲಿ ಪಾಲ್ಗೊಳ್ಳುವರು ಎಂದರು.