ಮೈಷುಗರ್ ವಿಷಯದಲ್ಲಿ ತಲೇನೋವು ಇದೆ-ಇದೊಂದು ಸವಾಲಿನ ಕೆಲಸ: ಸುಮಲತಾ

ಮಂಡ್ಯ : ಮೈ ಷುಗರ್ ಕಂಪನಿಯ ವಿಚಾರ ನನಗೆ ಪ್ರಮುಖವಾದ ಮತ್ತು ಹತ್ತಿರವಾದ ವಿಷಯವಾಗಿದೆ. ಇದರ ಬಗೆಗಿನ ಹೋರಾಟವು ನಿಮಗೆ ಮಾತ್ರವಲ್ಲದೆ ನನಗೂ ಹೋರಾಟವಾಗಿದೆ ಎಂದು ಮಂಡ್ಯ ಲೋಕ ಸಭಾ ಕ್ಷೇತ್ರದ ಸಂಸದರಾದ ಸುಮಲತಾ ಅಂಬರೀಷ್ ಸ್ಪಷ್ಟಪಡಿಸಿದರು.
ಜಿಲ್ಲಾಧಿಕಾರಿ ಕಛೇರಿಯ ಸಂಕೀರ್ಣದಲ್ಲಿ ಜಿಲ್ಲಾಡಳಿತ, ಮೈ ಷುಗರ್ ಕಬ್ಬು ಬೆಳೆಗಾರರ ಒಕ್ಕೂಟದ ಸಹಯೋಗದಲ್ಲಿ ರೈತರ ಅಶೋತ್ತರಗಳನ್ನು ಈಡೇರಿಸುವ ಮತ್ತು ಮೈ ಷುಗರ್ ಕಂಪನಿಯನ್ನು ಓ ಅಂಡ್‍ಎಂ ಗೆ ವಹಿಸುವಬೇಕು ಅಥವಾ ಸರ್ಕಾರವೇ ನಡೆಸಬೇಕು ಎನ್ನುವ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಇದರ ಬಗೆಗೆ ಸಚಿವರಾದ ನಾರಾಯಣಗೌಡರು, ಶಿವರಾಮ್ ಹೆಬ್ಬಾರರ ಜೊತೆ ಮಾತನಾಡಿದ್ದೇನೆ ಎಂದು ಹೇಳಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಜೊತೆಯಲ್ಲು ಮಾತನಾಡಿದಾಗ ಪ್ರಸ್ತುತ ಚುನಾವಣೆಯ ಫಲಿತಾಂಶದ ನಂತರ ಮೈ ಶುಗರ್ ಕಂಪನಿ ಆರಂಭಿಸುವ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುತ್ತೇನೆ, ಯಾವುದೇ ಕಾರಣಗಳಿದ್ದರು ಬದಿಗೊತ್ತಿ ಮೈ ಷುಗರ್ ಕಂಪನಿ ಕಾರ್ಯಾರಂಭವಾಗುವ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ ಎಂದರು.
ಕಂಪನಿಯ ವಿಷಯದಲ್ಲಿ ನಿಮಗೆ ಎಷ್ಟು ನೋವಿದೆ ಅಷ್ಟೇ ನೋವು ನನಗೂ ಕೂಡ ಇದ್ದು ಇದೊಂದು ಸವಲಾಗಿದೆ ಈ ಸವಾಲಿನ ಫಲಿತಾಂಶವು ಉತ್ತಮವಾಗಿರುತ್ತದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಮಾತನಾಡಿ, ಜಿಲ್ಲೆಗೆ ಬರಬೇಕಾದ ಅನೇಕ ಸೌಲಭ್ಯಗಳು ಸರ್ಕಾರದಲ್ಲಿ ಬಾಕಿ ಇದೆ. ಆ ಸೌಲಭ್ಯಗಳನ್ನು ಜಿಲ್ಲೆಗೆ ಆದಷ್ಟೂ ಬೇಗ ತರುವುದಾಗಿ ಹೇಳಿದರು ಮತ್ತು ಜಿಲ್ಲೆಯಲ್ಲಿನ ಕುಂದು ಕೊರತೆಗಳನ್ನು ಗಮನಹರಿಸಿದ್ದು ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಾರ್ಯನಿರ್ವಹಿಸುತ್ತ ಇದೆ ಎಂದರು.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಚಂದ್ರಶೇಖರ್, ಆಹಾರ ನಾಗರೀಕ ಮತ್ತು ಸರಬರಾಜು ಇಲಾಖೆ ಜಂಟಿ ನಿರ್ದೇಶಕಿ ಕುಮುದಾ ಶರತ್ ಮತ್ತು ಮೈ ಷುಗರ್ ಕಬ್ಬು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ವೇಣುಗೋಪಾಲ್, ಗೌರವ ಅಧ್ಯಕ್ಷ ಕೀಲಾರ ಕೃಷ್ಣ ಇತರರು ಉಪಸ್ಥಿತರಿದ್ದರು.