ಮಂಡ್ಯ: ಜೂ.11:- ಜಿಲ್ಲೆಯ ಜೀವನಾಡಿ ಮೈಷುಗರ್ ಕಾರ್ಖಾನೆ ಪ್ರಾರಂಭ ಮಾಡಲು ಮೊದಲ ಕ್ಯಾಬಿನೆಟ್ ಸಭೆಯಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ 50 ಕೋಟಿ ಅನುದಾನ ಮಂಜೂರು ಮಾಡಿದ್ದಾರೆ. ಮೈಷುಗರ್ ಕಾರ್ಖಾನೆ ಪುನಶ್ಚೇತನಕ್ಕೆ ಕ್ರಮ ವಹಿಸಲಾಗಿದೆ ಎಂದು ಕೃಷಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಅವರು ಕರ್ನಾಟಕದ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಧ್ಯದಲ್ಲೇ ಕಾರ್ಖಾನೆ ಪ್ರಾರಂಭ ಮಾಡಲು ಚಿಂತನೆ ನಡೆಸಿದ್ದೇವೆ.ಹೊಸ ಕಾರ್ಖಾನೆ ಸ್ಥಾಪನೆಗೆ ರೂಪುರೇಷೆ ತಯಾರಿಸಲು ಅಧಿಕಾರಿಗಳಿ ಸೂಚಿಸಲಾಗಿದೆ. ಅವಶ್ಯಕತೆ ಬಿದ್ದರೆ ಹೊಸ ಕಾರ್ಖಾನೆ ಸ್ಥಾಪನೆಗೆ ಸರ್ಕಾರದ ಜೊತೆ ಚರ್ಚಿಸಿ ಮುಂದಾಗುವುದಾಗಿ ಹೇಳಿದರು.
ಕಾರ್ಖಾನೆಗೆ ಅಗತ್ಯವಿರುವ ಹೊಸ ಯಂತ್ರೋಪಕರಣಗಳನ್ನು ಅಳವಡಿಸಿ ಕಾರ್ಖಾನೆ ಯಾವುದೇ ಲೋಪವಿಲ್ಲದಂತೆ ಸುಸೂತ್ರವಾಗಿ ನಡೆಯಲು ಮುತುವರ್ಜಿ ವಹಿಸುವುದಾಗಿ ಹೇಳಿದರು.
ಮೈಸೂರು-ಬೆಂಗಳೂರು ರಾಷ್ಟ್ರೀಯ ದಶಪಥ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕ ಹಾಗೂ ಕಳಪೆಯಿಂದ ಕೂಡಿದ್ದು, ಈ ಸಂಬಂಧ ಸಮಗ್ರ ತನಿಖೆಯಾಗಬೇಕು ಎಂದರು.
ಬೆಂಗಳೂರು-ಮೈಸೂರು ರಾಷ್ಟ್ರೀಯ ದಶಪಥ ಹೆದ್ದಾರಿಯಲ್ಲಿ ಕನಿಷ್ಠ ಶೌಚಾಲಯದ ವ್ಯವಸ್ಥೆ ಇಲ್ಲ, ಅಂಬ್ಯುಲೆನ್ಸ್ ವ್ಯವಸ್ಥೆ ಇಲ್ಲ. ಪ್ರಾಥಮಿಕ ಚಿಕಿತ್ಸಾ ಸೌಲಭ್ಯವಿಲ್ಲ.ಬಹುಶಃ ಇಡೀ ರಾಷ್ಟ್ರದಲ್ಲಿ ಇಷ್ಟು ಕಳಪೆಯಿಂದ ಕೂಡಿರುವ ರಾಷ್ಟ್ರೀಯ ಹೆದ್ದಾರಿ ಬಹುಶಃ ಇನ್ನೆಲ್ಲೂ ಕಾಣಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ರಾಷ್ಟ್ರೀಯ ಹೆದ್ದಾರಿಗೆ ರೈತರಿಂದ ಭೂ ಸ್ವಾಧೀನ ಮಾಡಿಸಿಕೊಂಡಿರುವುದರಲ್ಲೂ ಸಾಕಷ್ಟು ಅವ್ಯವಹಾರಗಳು ನಡೆದಿವೆ. ರೈತರಿಗೆ ಸಮರ್ಪಕವಾಗಿ ಪರಿಹಾರ ವಿತರಣೆಯಾಗಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿವೆ. ಈ ಸಂಬಂಧ ನಿಷ್ಪಕ್ಷಪಾತ ತನಿಖೆಯಾಗಬೇಕು. ತಪ್ಪಿತಸ್ಥರು ಯಾರೇ ಆದರೂ ಅವರ ವಿರುದ್ಧ ಕಾನೂನು ಕ್ರಮ ಆಗಬೇಕು ಎಂದು ಒತ್ತಾಯಿಸಿದರು.
ಬೆಂಗಳೂರು-ಮೈಸೂರು ಮಾರ್ಗ ಮಧ್ಯೆ ಬರುವ ಮಂಡ್ಯ ನಗರಕ್ಕೆ ಹೆದ್ದಾರಿ ಪ್ರವೇಶ ಹಾಗೂ ನಿರ್ಗಮನದ ಬಗ್ಗೆಯೂ ಸ್ಪಷ್ಟವಾಗಿ ಮಾಹಿತಿ ಇಲ್ಲ. ಈ ಎಲ್ಲ ಗೊಂದಲಗಳ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚಿಸಿ ಅನುಕೂಲ ಕಲ್ಪಿಸಿಕೊಡುವ ಭರವಸೆ ನೀಡಿದರು.
ಬೇಸಿಗೆ ಬೆಳೆಗೆ ನೀರು ಹರಿಸಲು ಕ್ರಮ: ನಿಗದಿತ ಪ್ರಮಾಣದಲ್ಲಿ ಮುಂಗಾರು ಮಳೆಯಾಗಿಲ್ಲ. ಕೇರಳದಲ್ಲಿ ಮಾನ್ಸೂನ್ ಮಳೆ ಇದೀಗ ತಾನೇ ಪ್ರಾರಂಭವಾಗಿದೆ. ಇನ್ನೆರಡ್ಮೂರು ದಿನಗಳಲ್ಲಿ ಮುಂಗಾರು ಮಳೆ ರಾಜ್ಯ ಪ್ರವೇಶ ಮಾಡುವ ನಿರೀಕ್ಷೆ ಇದೆ ಎಂದರು.
ಕೆ.ಆರ್.ಎಸ್. ಜಲಾಶಯದಲ್ಲಿ 82 ಅಡಿ ನೀರಿದೆ. ಒಣಗುತ್ತಿರುವ ಬೆಳೆಗಳಿಗೆ ಕೆಆರ್‍ಎಸ್ ಜಲಾಶಯದಿಂದ ನೀರು ಹರಿಸಲು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಕಟಾವಿಗೆ ಬಂದಿರುವ ಬೆಳೆಗಳಿಗೆ ನೀರಿನ ಕೊರತೆ ಎದುರಾಗುವುದಿಲ್ಲ ಎಂದರು.
ಜಿಲ್ಲೆಯ ಅಭಿವೃದ್ಧಿ ನಿರ್ಲಕ್ಷ್ಯ: 2018 ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಜನತೆ ಏಳು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರು. ಆದರೆ, ದಳಪತಿಗಳು ಜಿಲ್ಲೆಯ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರು. ಹಾಗಾಗಿ ಈ ಚುನಾವಣೆಯಲ್ಲಿ ಮತದಾರರು ಅವರಿಗೆ ತಕ್ಕ ಉತ್ತರ ನೀಡಿದ್ದಾರೆ ಎಂದು ಜೆಡಿಎಸ್ ಮಾಜಿ ಶಾಸಕರಿಗೆ ಟಾಂಗ್ ನೀಡಿದರು.
ಶಕ್ತಿ ಯೋಜನೆಗೆ ಚಾಲನೆ: ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಂತೆ ಮಹಿಳೆಯರಿಗೆ ಸಾರಿಗೆ ವಾಹನದಲ್ಲಿ ಉಚಿತ ಪ್ರಯಾಣ ಶಕ್ತಿ ಯೋಜನೆಗೆ ಸಿ.ಎಂ. ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಚಾಲನೆ ನೀಡಲಿದ್ದಾರೆ. ಮಂಡ್ಯ ನಗರದ ಬಸ್‍ನಿಲ್ದಾಣದಲ್ಲಿ ನಾನು ಚಾಲನೆ ನೀಡುವವನಿದ್ದೇನೆ ಎಂದರು.
ಕೃಷಿ ಸಂಶೋಧನಾ ಸಂಸ್ಥೆ ಉನ್ನತೀಕರಣ: ವಿಸಿ ಫಾರಂ ನಲ್ಲಿರುವ ಕೃಷಿ ಸಂಶೋಧನಾ ಕೇಂದ್ರದ ಉನ್ನತೀಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಪಡೆದು ರೈತರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುವುದಾಗಿ ತಿಳಿಸಿದರು.
ಆಲೆಮನೆಗಳ ಸುಧಾರಣೆಗೆ ಮುಂದಾಗುವ ರೈತರಿಗೆ ಸರ್ಕಾರದಿಂದ ಪ್ರೋತ್ಸಾಹ ನೀಡಲಾಗುವುದು. ಕಬ್ಬು ಬೆಳೆಗಾರರಿಗೆ ತೊಂದರೆಯಾಗದಂತೆ ಸಾವಯವ ಬೆಲ್ಲ ತಯಾರಿಕೆಗೆ ಉತ್ತೇಜನ ನೀಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ವತಿಯಿಂದ ಸಚಿವರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಮತ್ತಿಕೆರೆ ಜಯರಾಂ,ಸೋಮಶೇಖರ್ ಕೆರಗೋಡು,ಜಿಲ್ಲಾ ಸಂಘದ ಅಧ್ಯಕ್ಷ ಮಂಜುನಾಥ್,ಬಿಪಿ.ಪ್ರಕಾಶ್ ಹಾಜರಿದ್ದರು.