
ಸಂಜೆವಾಣಿ ವಾರ್ತೆ
ಹೂವಿನಹಡಗಲಿ : ಸೆ,1-: ತಾಲೂಕಿನ ಮೈಲಾರ ಸುಕ್ಷೇತ್ರದಲ್ಲಿ ನೂಲ ಹುಣ್ಣಿಮೆ ಪ್ರಯುಕ್ತ ಮೈಲಾರಲಿಂಗೇಶ್ವರ ಸ್ವಾಮಿ ದರ್ಶನಕ್ಕೆ ಅಪಾರ ಭಕ್ತರು ಆಗಮಿಸಿದ್ದರು.
ಬೆಳಿಗ್ಗೆ ಸ್ವಾಮಿಗೆ ವಿಶೇಷ ಅಭಿಷೇಕ ಹಾಗೂ ಮಹಾಪೂಜೆ ನೆರವೇರಿಸಿ ವಿವಿಧ ಹೂವು ಹಾಗೂ ಬೆಳ್ಳಿ ಆಭರಣಗಳಿಂದ ಸರ್ವಾಲಂಕಾರ ಮಾಡಲಾಗಿತ್ತು. ಶ್ರಾವಣಮಾಸ ಇದಾಗಿದ್ದರಿಂದ ಮೈಲಾರಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಉಚಿತ ದರ್ಶನಕ್ಕಾಗಿ ಸುಡು ಬಿಸಿಲಲ್ಲಿ ಗಂಟೆಗಟ್ಟಲೆ ಕಾಯಬೇಕಾಗಿತ್ತು.
ಇನ್ನು ಕ್ಷೇತ್ರಕ್ಕೆ ಬಂದ ಭಕ್ತರಿಗೆ ಹೊಳಲು ಗ್ರಾಮದ ವರ್ತಕರಾದ ಬೆಂಡಿಗೇರಿ ವೀರಣ್ಣ ಮತ್ತು ಸಹೋದರರು ವಿಶೇಷವಾಗಿ ಪ್ರಸಾದ ವ್ಯವಸ್ಥೆಯನ್ನು ಮಾಡಿದ್ದರು. ದೇವಸ್ಥಾನದ ಪ್ರಧಾನ ಅರ್ಚಕರಾದ ವೆಂಕಪ್ಪಯ್ಯ ಒಡೆಯರ್ ಪ್ರಸಾದಕ್ಕೆ ಚಾಲನೆ ನೀಡಿದರು. ಕಾರ್ಯ ನಿರ್ವಹಣಾಧಿಕಾರಿ ಬಿ.ಎಂ. ಕೃಷ್ಣಪ್ಪ ಹಾಗೂ ಹೊಳಲು ಗ್ರಾಮದ ಭಕ್ತರಾದ ಹೆಚ್.ಡಿ ಜಗ್ಗಿನ ಸೇರಿದಂತೆ ದೇವಸ್ಥಾನದ ಸಿಬ್ಬಂಧಿಗಳು ಭಕ್ತರಿಗೆ ಪ್ರಸಾದ ವಿತರಿಸಿದರು.