ಮೈಲಾರ ಸುಕ್ಷೇತ್ರದಲ್ಲಿ ಹೋಮ ಅನುಷ್ಠಾನ, ಯತಿ ಸಮಾವೇಶ ಮಠಗಳ ಕಾರ್ಯ ಅನನ್ಯ : ಜಯಮೃತ್ಯುಂಜಯ ಸ್ವಾಮೀಜಿ

ಹೂವಿನಹಡಗಲಿ:ಸೆ.21. ನಿರಂತರ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ನಾಡಿನ ಮಠಗಳ ಕೊಡುಗೆ ಅನನ್ಯವಾಗಿವೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ತಾಲೂಕಿನ ಮೈಲಾರ ಸುಕ್ಷೇತ್ರದಲ್ಲಿ ಅಧಿಕ ಮಾಸ ಪ್ರಯುಕ್ತ ಶಂಕರ ಸೇವಾ ಟ್ರಸ್ಟ್ ಹಮ್ಮಿಕೊಂಡಿದ್ದ ಅಖಂಡ ವೀಣಾ ಸಪ್ತಾಹ, ಹೋಮ ಅನುಷ್ಠಾನ ಹಾಗೂ ಯತಿ ಸಮಾವೇಶದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಮೈಲಾರ ಸುಕ್ಷೇತ್ರವು ಕಾಶಿ, ಕೇದಾರ, ಬದರಿಯಂತಹ ತೀರ್ಥಕ್ಷೇತ್ರಗಳಷ್ಟೇ ಐತಿಹಾಸಿಕ ಮಹತ್ವ ಪಡೆದಿದೆ. ಈ ಭೂಮಿ ಮೇಲೆ ಅಲ್ಪ ಮಾನವನಾಗಿ ಹುಟ್ಟಿದ ಮನುಷ್ಯ ವಿಶ್ವ ಮಾನವನಾಗಬೇಕಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕಾಗಿನೆಲೆ ಕನಕ ಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ, ಮನುಷ್ಯ ದ್ವೇಷ, ಅಸೂಯೆಗಳನ್ನು ತೊರೆದು ಸತ್ಸಂಗದ ಕಡೆ ಮುಖ ಮಾಬೇಕಿದೆ. ಇನ್ನೊಬ್ಬರನ್ನು ನೋಡಿ ಕೈ ತಿಕ್ಕುವ ಬದಲು, ಸಮಾಜದ ಪ್ರಗತಿಗೆ ಕೈ ಜೋಡಿಸುವಂತಾಗಬೇಕು ಎಂದು ಹೇಳಿದರು.
ಕುರುಬ ಸಮುದಾಯಕ್ಕೆ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಪ್ರಜ್ಞೆ ಮೂಡಿಸುವ ಉದ್ದೇಶದಿಂದ ಮೈಲಾರ ಸುಕ್ಷೇತ್ರದಲ್ಲಿ ಶಾಖಾ ಮಠ ಕಟ್ಟಿದ್ದೇವೆ ಹೊರತು ಯಾರದೋ ಆದಾಯ ಕಸಿಯಲು ಅಲ್ಲ. ಸರ್ಕಾರ ಬಿಡುಗಡೆಗೊಳಿಸಿದ ಅನುದಾನವನ್ನು ಸದುಪಯೋಗಪಡಿಸಿಕೊಂಡು 10 ಕೋಟಿ ರೂ. ವೆಚ್ಚದಲ್ಲಿ ಮೈಲಾರದಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ತೆರೆಯುತ್ತೇವೆ ಎಂದು ತಿಳಿಸಿದರು.
ಶಂಕರ ಸೇವಾ ಟ್ರಸ್ಟ್‍ನ ಅಧ್ಯಕ್ಷ ಮಲ್ಲಾರ ಭಟ್ ಜೋಶಿ, ವಂಶ ಪಾರಂಪರ್ಯ ಅರ್ಚಕ ಎಂ.ವಿರುಪಾಕ್ಷ ಭಟ್ಟರು. ಕೊಪ್ಪಳದ ಸಂತ ಶ್ರೇಷ್ಠ ಸುರೇಶ್ ಪಾಟೀಲ್ ಮಹಾರಾಜ್, ಶಂಕರ ಸೇವಾ ಟ್ರಸ್ಟನ ಪ್ರಮೋದ್ ಭಟ್ ಇತರರು ಇದ್ದರು. ರವಿಕುಮಾರ್ ಭಟ್ ಸ್ವಾಗತಿಸಿದರು.