ಮೈಲಾರ ಜಾತ್ರೆ : ಮೂಲಸೌಕರ್ಯ ಕಾಮಗಾರಿ ಆರಂಭಿಸಲು ಸೂಚನೆ

ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಜ.13: ತಾಲೂಕಿನ ಮೈಲಾರ ಸುಕ್ಷೇತ್ರದಲ್ಲಿ ಇದೇ ತಿಂಗಳು 28 ರಿಂದ ಫೆ. 8ರವರೆಗೆ ಜರುಗಲಿರುವ ವಾರ್ಷಿಕ ಜಾತ್ರಾ ಮಹೋತ್ಸವ ಸಿದ್ಧತೆಗಳನ್ನು ಇಂದಿನಿಂದಲೇ ಆರಂಭಿಸಬೇಕು ಎಂದು ಸಹಾಯಕ ಆಯುಕ್ತ ಟಿ.ವಿ.ಪ್ರಕಾಶ್ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ಕಚೇರಿಯಲ್ಲಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, 13 ರಂದು ನಿಗದಿಯಾಗಿದ್ದ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಪೂರ್ವಭಾವಿ ಸಭೆ ಅನಿವಾರ್ಯ ಕಾರಣದಿಂದ ಮುಂದೂಡಲಾಗಿದೆ. ಸಭೆಯ ನಿರ್ಣಯಗಳಿಗೆ ಕಾಯದೇ ಅಧಿಕಾರಿಗಳು ಪ್ರತಿವರ್ಷದಂತೆ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಆರಂಭಿಸಬೇಕು ಎಂದು ತಿಳಿಸಿದರು.
ಡೆಂಕನಮರಡಿಯಲ್ಲಿ ಬ್ಯಾರಿಕೇಡ್ ಅಳವಡಿಸುವ, ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗೆ ಕುಡಿಯುವ ನೀರು, ನೈರ್ಮಲ್ಯ ಇತರೆ ಸೌಕರ್ಯಗಳನ್ನು ಕಲ್ಪಿಸುವ ಕೆಲಸಗಳನ್ನು ಆರಂಭಿಸಬೇಕು. ಸದ್ಯದಲ್ಲೇ ಜಿಲ್ಲಾಧಿಕಾರಿಗಳು, ಶಾಸಕರು ಮೈಲಾರದಲ್ಲಿ ಪೂರ್ವಭಾವಿ ಸಭೆ ನಡೆಸಲಿದ್ದಾರೆ. ಅಲ್ಲಿಯವರೆಗೆ ಕಾಯದೇ ತಮ್ಮ ಇಲಾಖೆಯ ಜವಾಬ್ದಾರಿಗಳನ್ನು ನಿರ್ವಹಿಸಬೇಕುಎಂದು ಹೇಳಿದರು.
ಮೈಲಾರಲಿಂಗೇಶ್ವರ ಜಾತ್ರೆ ಸಮೀಪಿಸಿರುವುದರಿಂದ ಆಯಾ ಇಲಾಖೆಗೆ ನೀಡಿರುವ ಜವಾಬ್ದಾರಿಯನ್ನು ಬೇಗನೆ ಪೂರ್ಣಗೊಳಿಸಿ, ಬರುವ ಭಕ್ತರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಪ್ರಕಾಶ ರಾವ್ ತಿಳಿಸಿದರು.
ತಹಶೀಲ್ದಾರ್ ಕೆ.ಶರಣಮ್ಮ ಮಾತನಾಡಿ, ಮೈಲಾರ ಜಾತ್ರೆಯ ಸಂದರ್ಭದಲ್ಲೇ ಫೆ. 5 ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಫೆ.6 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಾಗೂ ಫೆ..7 ರಂದು ಕಾರ್ಣಿಕೋತ್ಸವ ಇರುವ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಲಿದೆ. ಆದರಿಂದ ಅಧಿಕಾರಿಗಳು ತಮ್ಮಗೆ ನೀಡಿರುವ ಜವಾಬ್ದಾರಿ ಕೆಲಸಗಳನ್ನು ಕಡ್ಡಾಯವಾಗಿ ಮಾಡಬೇಕೆಂದು ಹೇಳಿದರು.
ಸಭೆಯಲ್ಲಿ ತಾಪಂ ಇಒ ಎಸ್.ಎಸ್.ಪ್ರಕಾಶ ಸೇರಿದಂತೆ ಎಲ್ಲ ಇಲಾಖೆಯ ಅ„ಕಾರಿಗಳು ಹಾಗೂ ಮೈಲಾರ ಗ್ರಾಪಂ ಅಧ್ಯಕ್ಷ ಹಾಗೂ ಸದಸ್ಯರು ಉಪಸ್ಥಿತರಿದ್ದರು.