ಮೈಲಾರಲಿಂಗೇಶ್ವರ ಪರವು ನಿಮಿತ್ತ ಪಡ್ಲಿಗೆ ತುಂಬಿಸುವ ಕಾರ್ಯ

ಸಂಜೆವಾಣಿ ವಾರ್ತೆ

ಮಲೇಬೆನ್ನೂರು.ಮಾ.೪: ಪಟ್ಟಣದ ಜಿಗಳಿ ರಸ್ತೆಯಲ್ಲಿನ ಮೈಲಾರಲಿಂಗೇಶ್ವರ ಶಿಬಾರಕಟ್ಟೆ ಸೇವಾ ಸಮಿತಿ ಆಶ್ರಯದಲ್ಲಿ ಮೈಲಾರಲಿಂಗೇಶ್ವರ ಸ್ವಾಮಿ ಹಾಗೂ ಗಂಗಮಾಳಮ್ಮ ದೇವರುಗಳ ಪ್ರಾಣ ಪ್ರತಿಷ್ಠಾಪನೆಯಾಗಿ 14 ವರ್ಷಗಳು ತುಂಬಿದ ಪ್ರಯುಕ್ತ ಮೈಲಾರಲಿಂಗೇಶ್ವರ ಸ್ವಾಮಿಯ ಪರುವು ಜರುಗಿತು.ಬೆಳಗ್ಗೆ ಗಂಗಾಪೂಜೆ, ಭಂಡಾರ ಅರ್ಚನೆ, ಅಭಿಷೇಕ, ಮಹಾ ಮಂಗಳಾರುತಿ, ಚಾಟಿ ಸೇವೆ, ಪವಾಡ, ಗೊರವಯ್ಯ ಮತ್ತು ಗೊರವಮ್ಮನವರಿಗೆ ಪಡ್ಲಿಗೆ ತುಂಬಿಸುವ ಕಾರ್ಯ ನೆರವೇರಿತು. ಚಾಟಿ ಗೊರವಯ್ಯನವರಿಂದ ಚಾಟಿ ಸೇವೆ ನಡೆಯಿತು. ಮಧ್ಯಾಹ್ನ ಸಹಸ್ರಾರು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಭಕ್ತರು ಸ್ವಾಮಿಯ ದರ್ಶನಾಶೀರ್ವಾದ ಪಡೆದರು. ದೇವಸ್ಥಾನಕ್ಕೆ ವಿದ್ಯುತ್‌ದೀಪ ಮತ್ತು ತಳಿರುತೋರಣಗಳಿಂದ ಸಿಂಗರಿಸಲಾಗಿತ್ತು. ಮೈಲಾರಲಿಂಗೇಶ್ವರ ಸ್ವಾಮಿಗೆ, ಗಂಗಮಾಳಮ್ಮ ದೇವಿಗೆ ಹಾಗೂ ಶಿಬಾರಕಟ್ಟೆಗೆ ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಲಾಗಿತ್ತು.ಶಿಬಾರಕಟ್ಟೆ ಸೇವಾ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು, ಭಕ್ತರು ಇದ್ದರು.