ಮೈಮುಲ್ ಚುನಾವಣೆ: ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ. ಜಿಟಿಡಿ

ಮೈಸೂರು,ಮಾ.15:- ಮೈಮುಲ್ ಚುನಾವಣೆಯಲ್ಲಿ ಹೆಚ್. ಡಿ. ಕುಮಾರಸ್ವಾಮಿಯವರು ನನ್ನನ್ನು ಟಾರ್ಗೆಟ್ ಮಾಡಿಕೊಂಡಿದ್ದಾರೆ. ಮೈಮುಲ್ ಚುನಾವಣೆಯನ್ನು ನಾನು ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ. ಆದರೆ ಕುಮಾರಸ್ವಾಮಿಯವರು ಏಕೆ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೋ ಗೊತ್ತಿಲ್ಲ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಮೈಮುಲ್ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ಜೆಡಿಎಸ್ ಅಭ್ಯರ್ಥಿಗಳ ವಿರುದ್ಧವಾಗಿ ಪ್ರಚಾರ ಮಾಡುತ್ತಿದ್ದಾರೆ. ಮೈಸೂರಿನ ಹೈಕಮಾಂಡ್ ಮಾತು ಕೇಳಿಕೊಂಡು ಕುಮಾರಸ್ವಾಮಿ ಈ ರೀತಿ ಮಾಡುತ್ತಿದ್ದಾರೆ ಎನ್ನುವ ಮೂಲಕ ಪರೋಕ್ಷವಾಗಿ ಶಾಸಕ ಸಾ. ರಾ. ಮಹೇಶ್ ವಿರುದ್ಧ ಹರಿಹಾಯ್ದರು.
ಪಿರಿಯಾಪಟ್ಟಣದಲ್ಲಿ ಮಾಜಿ ಶಾಸಕ ವೆಂಕಟೇಶ್ ಬೆಂಬಲಿಗರಿಗೆ ಜೆಡಿಎಸ್ ನವರೇ ಅನುಕೂಲ ಮಾಡಿಕೊಡುತ್ತಿದ್ದಾರೆ. ಜೆಡಿಎಸ್ ಶಾಸಕ ಮಹದೇವ್ ಪುತ್ರನ ವಿರುದ್ಧವಾಗಿ ಜೆಡಿಎಸ್ ನವರು ಕೆಲಸ ಮಾಡುತ್ತಿದ್ದಾರೆ. ಮಹಾಭಾರತದಲ್ಲಿ ಶಕುನಿಯಿಂದ ಕೌರವರ ಸಂತತಿ ಸರ್ವ ನಾಶವಾಯಿತು. ರಾಮಾಯಣದಲ್ಲಿ ಮಂಥರೆಯ ಮಾತು ಕೈಕೇಯಿ ಕೇಳಿದ ಪರಿಣಾಮ ರಾಮ ವನವಾಸಕ್ಕೆ ತೆರಳುವಂತಾಯಿತು. ಇದೀಗ ಮೈಸೂರಿನಲ್ಲೂ ಶಕುನಿ, ಮಂಥರೆಯ ಮಾತು ಕೇಳುತ್ತಿರುವ, ಕುಮಾರಸ್ವಾಮಿ ಜೆಡಿಎಸ್ ಅನ್ನು ಸರ್ವನಾಶ ಮಾಡಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಜಿ.ಟಿ.ದೇವೇಗೌಡರಿಗೆ ಜೆಡಿಎಸ್ ಬಾಗಿಲು ಬಂದ್ ಆಗಿದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಅವರು ನಾನು ಈಗಲೂ ಜೆಡಿಎಸ್ ನಲ್ಲೇ ಇದ್ದೇನೆ. ವಿಧಾನಸಭೆಯಲ್ಲೂ ಜೆಡಿಎಸ್ ಶಾಸಕರ ಜೊತೆಯೇ ಕುಳಿತುಕೊಳ್ಳುತ್ತಿದ್ದೇನೆ. ನಾನು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿಲ್ಲ. ನಾನೇನು ಜೆಡಿಎಸ್ ವಿರುದ್ಧ ಕೆಲಸ ಮಾಡುತ್ತಿಲ್ಲ. ನಾನು ಈಗಲೂ ಜೆಡಿಎಸ್ ನಲ್ಲೇ ಇದ್ದೇನೆ. ಮೈಸೂರಿನ ಹೈಕಮಾಂಡ್ ಮಾತು ಕೇಳಿಕೊಂಡು ಕುಮಾರಸ್ವಾಮಿಯವರು ಈ ರೀತಿ ಹೇಳುತ್ತಿದ್ದಾರೆ ಎಂದರು.
ಕುಮಾರಸ್ವಾಮಿ ಶಕುನಿ ಮಾತು ಕೇಳುತ್ತಿದ್ದಾರೆ ಎನ್ನುವ ಮೂಲಕ ಮಾಜಿ ಸಚಿವ, ಸ್ವಪಕ್ಷೀಯ ಶಾಸಕ ಸಾ. ರಾ. ಮಹೇಶ್ ಅವರನ್ನು ಶಕುನಿಗೆ ಹೋಲಿಸಿದ ಶಾಸಕ ಜಿ. ಟಿ. ದೇವೇಗೌಡ ಕುಮಾರಸ್ವಾಮಿ ಅವರೇ ನೀವ್ಯಾಕೆ ಶಕುನಿ ಮಾತು ಕೇಳುತ್ತಿದ್ದೀರಿ? ಸಾ. ರಾ. ಮಹೇಶ್ ಛತ್ರಕ್ಕೆ ಬಂದು ನನ್ನನ್ನು ಜೆಡಿಎಸ್‍ನಿಂದ ಹೊರಗೆ ಹಾಕುತ್ತೇನೆ ಎಂದು ಹೇಳಿದ್ದೀರಿ. ಪದೇ ಪದೇ ನನ್ನನ್ನು ಯಾಕೆ ಅವಮಾನ ಮಾಡುತ್ತೀರಿ. ನಾನು ಈಗಲೂ ಜೆಡಿಎಸ್‍ನಲ್ಲೇ ಇದ್ದೇನೆ. ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕರ ಸಾಲಿನಲ್ಲೇ ನನಗೆ ಖುರ್ಚಿ ಇದೆ. ನಾನು ಈಗಲೂ ಜೆಡಿಎಸ್ ಶಾಸಕರ ಜೊತೆಯಲ್ಲೇ ಕುಳಿತುಕೊಳ್ಳುತ್ತಿದ್ದೇನೆ. ನಾನು ಎಲ್ಲಿಗೂ ಹೋಗದಂತೆ ಜೆಡಿಎಸ್‍ನಲ್ಲಿ ಕೂಡಿಹಾಕಿ ಬೀಗ ಹಾಕಲಾಗಿದೆ. ಕುಮಾರಸ್ವಾಮಿ ಅವರು ಯಾರ್ಯಾರದ್ದೋ ಮಾತು ಕೇಳಿಕೊಂಡು ನನ್ನ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಹೆಚ್. ಡಿ. ಕೋಟೆಯಲ್ಲಿ ಮೈಮುಲ್ ಪ್ರಚಾರದ ವೇಳೆ ಮೈಸೂರು ಹೈಕಮಾಂಡ್ ನನ್ನ ವಿರುದ್ಧ ಮಾತನಾಡಿದ್ದಾರೆ. ಜಿ. ಟಿ. ದೇವೇಗೌಡ ಎನ್ನುವ ಆಲದ ಮರವನ್ನು ಬುಡಸಮೇತ ಕಿತ್ತುಹಾಕಿ ಹೊಸ ಗಿಡ ನೆಡುತ್ತೇವೆಂದು ಹೇಳಿದ್ದಾರೆ. ಅವರ ಮಾತು ಕೇಳಿಕೊಂಡು ಕುಮಾರಸ್ವಾಮಿ ಕೂಡ ನನ್ನ ವಿರುದ್ಧ ಮಾತನಾಡಿದ್ದಾರೆ. ನಾನು ಯಾವತ್ತೂ ಅಧಿಕಾರಕ್ಕೆ ಆಸೆ ಪಟ್ಟಿಲ್ಲ. ನಾನು ಮನಸ್ಸು ಮಾಡಿದ್ದರೆ ಶಾಶ್ವತವಾಗಿ ಮೈಮುಲ್ ಅಧ್ಯಕ್ಷನಾಗಿರುತ್ತಿದ್ದೆ. ಯಾವ ಕಾಲದಲ್ಲೋ ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗುತ್ತಿದ್ದೆ. ನನ್ನ ಮಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿದಾಗ ಕುಮಾರಸ್ವಾಮಿ ಸಹಕಾರ ಕೊಡಲಿಲ್ಲ. ಸಾ. ರಾ. ಮಹೇಶ್ ಮಾತು ಕೇಳಿಕೊಂಡು ಪ್ರತಿಸ್ಪರ್ಧಿ ಚಂದ್ರಶೇಖರ್ ಪರವಾಗಿ ಮತಯಾಚನೆ ಮಾಡಿದರು. ಜನರ ಆಶೀರ್ವಾದದಿಂದ ನನ್ನ ಮಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆಗಿದ್ದಾನೆ. ಜನ ಯಾರ ಪರವಾಗಿದ್ದಾರೆ ಎಂಬುದನ್ನು ಮೈಮುಲ್ ಚುನಾವಣೆ ಫಲಿತಾಂಶ ನಿರ್ಣಯಿಸಲಿದೆ ಎಂದರು.