ಮೈಮರೆತರೆ ಅಪಾಯ ಕಟ್ಟಿಟ್ಟಬುತ್ತಿ

ಬೆಂಗಳೂರು, ಜು. ೧೩- ಲಾಕ್‌ಡೌನ್ ನಿರ್ಬಂಧಗಳು ಸಡಿಲವಾದ ನಂತರ ದೇವಸ್ಥಾನ, ಮಾರುಕಟ್ಟೆ, ಮದುವೆ ಮತ್ತಿತರ ಕಡೆ ಜನಜಂಗುಳಿ ನೋಡಿದರೆ ಭಯವಾಗುತ್ತದೆ. ಜನತೆ ಎಚ್ಚರ ವಹಿಸಿ ಕೊರೊನಾ ಸುರಕ್ಷತಾ ಕ್ರಮಗಳನ್ನು ಪಾಲಿಸುವ ನಡವಳಿಕೆಯನ್ನು ರೂಢಿಸಿಕೊಳ್ಳದಿದ್ದರೆ ಎದುರಾಗಲಿರುವ ಕೊರೊನಾ ೩ನೇ ಅಲೆ ತಡೆಯುವುದು ಕಷ್ಟವಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ರವರು ಕಳವಳ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾ ಪ್ರವಾಸಕ್ಕೆ ತೆರಳುವ ಮುನ್ನ ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್‌ಡೌನ್ ನಿಯಮಗಳನ್ನು ಸಡಿಲಿಸಿದ ನಂತರ ಎಲ್ಲೆಡೆ ಜನ ಗುಂಪುಗೂಡುವುದು ಹೆಚ್ಚಾಗುತ್ತಿದೆ. ತಜ್ಞರು ಈ ಬಗ್ಗೆ ಎಚ್ಚರಿಕೆ ನೀಡಿದ್ದರೂ, ಜನ ಮೈಮರೆತು ನಡೆದುಕೊಳ್ಳುತ್ತಾರೆ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಜನ ಮೈಮರೆತರೆ ಅಪಾಯ ತಪ್ಪಿದ್ದಲ್ಲ ಎಂದು ಎಚ್ಚರಿಕೆ ನೀಡಿದರು.
ಕೊರೊನಾ ೨ನೇ ಅಲೆ ಇನ್ನು ಮುಗಿದಿಲ್ಲ. ೩ನೇ ಅಲೆ ಆರಂಭವಾಗಿದೆ ಎಂದು ಇನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಆದರೆ ಜನರ ನಡವಳಿಕೆ ನೋಡಿದರೆ ಭಯವಾಗುತ್ತದೆ. ಜನ ಕೊರೊನಾ ಸುರಕ್ಷತಾ ನಿಯಮಗಳನ್ನು ಪಾಲಿಸದಿದ್ದರೆ ಮೂರನೇ ಅಲೆ ತಡೆಯುವುದು ಬಲು ಕಷ್ಟ ಎಂದರು.
ಜನ ಎಲ್ಲೆಂದರಲ್ಲಿ ಗುಂಪು ಸೇರುವುದು, ಜನಜಂಗುಳಿ ಸೃಷ್ಠಿಯಾಗುವುದು ತಪ್ಪಬೇಕು. ದೇವಸ್ಥಾನ, ಮಾರುಕಟ್ಟೆಗಳಲ್ಲಿ ಜನರನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಮದುವೆ ಸಮಾರಂಭಗಳಿಗೆ ೧೦೦ ಜನ ಸೇರಲು ಅನುಮತಿ ನೀಡಿದರೆ ೪೦೦-೫೦೦ ಜನ ಸೇರುತ್ತಿದ್ದಾರೆ. ಹೀಗಾದರೆ ಹೇಗೆ ಎಂದು ಅಸಮಾಧಾನ ಹೊರ ಹಾಕಿದರು.
ರಾಜ್ಯದಲ್ಲಿ ಕೊರೊನಾ ಸೋಂಕು ಇಳಿಮುಖವಾಗಿದೆ. ಸೋಂಕಿನ ಪ್ರಮಾಣ ಶೇ. ೧.೫ಕ್ಕಿಂತ ಕಡಿಮೆ ಇದೆ ನಿಜ. ಹಾಗೆಂದು ೨ನೇ ಅಲೆ ಮುಗಿದೇ ಹೋಗಿದೆ, ೩ನೇ ಅಲೆ ಬರಲ್ಲ ಎಂದು ಜನ ಮೈಮರೆತು ಗುಂಪುಗೂಡಿ ಮಾಸ್ಕ್ ಹಾಕದೆ ಓಡಾಡುವುದು ಸರಿಯಲ್ಲ. ಶೇ. ೬೦ ರಿಂದ ೭೦ ರಷ್ಟು ಲಸಿಕಾಕರಣ ಆಗುವವರೆಗೂ ಬಹಳ ಎಚ್ಚರಿಕೆಯಿಂದ ಇರಬೇಕು ಎಂದರು.
ಮೂರನೇ ಅಲೆ ಈಗಲೇ ಆರಂಭವಾಗಿದೆ ಎಂದು ನನಗೆ ಅನಿಸುವುದಿಲ್ಲ. ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿ ಸೋಂಕು ಪ್ರಕರಣಗಳು ಹೆಚ್ಚಾಗಿವೆ ನಿಜ. ಕೇರಳದಲ್ಲಿ ೨ನೇ ಅಲೆಯೇ ಮುಗಿದಿಲ್ಲ. ಅಲ್ಲಿ ಸೋಂಕು ಪ್ರಕರಣಗಳು ನಿತ್ಯ ೧೦ ಸಾವಿರಕ್ಕಿಂತ ಕಡಿಮೆಯಾಗಿಲ್ಲ. ನಮ್ಮ ರಾಜ್ಯದಲ್ಲಿ ೨ನೇ ಅಲೆ ಕೊನೆಯ ಹಂತದಲ್ಲಿರುವಂತಿದೆ. ಆದರೂ ಸೋಂಕು ತಗುಲುವ ಪ್ರಮಾಣ ಶೇ. ೧ ಕ್ಕಿಂತ ಕಡಿಮೆಯಾದರೆ ಆಗ ೨ನೇ ಅಲೆ ಇಳಿದಿದೆ ಎಂಬ ನಿರ್ಧಾರಕ್ಕೆ ಬರಬಹುದು. ಈಗ ಸೋಂಕು ತಗುಲುವ ಪ್ರಮಾಣ ಶೇ. ೧.೨ ರಿಂದ ಶೇ. ೧.೩ರ ಆಸುಪಾಸಿನಲ್ಲಿದೆ ಎಂದರು.
ಜನರ ನಡವಳಿಕೆಯನ್ನು ನೋಡಿದರೆ ೩ನೇ ಅಲೆ ಬರುವ ಸಾಧ್ಯತೆಗಳನ್ನು ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಹಾಗಾಗಿ ೨ನೇ ಅಲೆಯಲ್ಲಿ ಆದ ಅನಾಹುತಗಳು ಆಗದಂತೆ ೩ನೇ ಅಲೆ ತಡೆಯಲು ಸರ್ವ ಸನ್ನದ್ಧವಾಗಿದ್ದೇವೆ. ಆರೋಗ್ಯ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವತ್ತ ಗಮನ ನೀಡಲಾಗಿದೆ ಎಂದರು.
ಜನ ಸಹಕರಿಸಿ ನಡವಳಿಕೆಗಳನ್ನು ಬದಲಾಯಿಸಿಕೊಂಡು ಅನಗತ್ಯವಾಗಿ ಸಭೆ ಸೇರುವುದು, ಗುಂಪುಗೂಡುವುದನ್ನು ನಿಲ್ಲಿಸಿದರೆ ಮಾತ್ರ ೩ನೇ ಅಲೆಯನ್ನು ತಡೆಯಲು ಸಾಧ್ಯ ಎಂದು ಅವರು ಪುನರುಚ್ಚರಿಸಿದರು.
ರಾತ್ರಿ ಕರ್ಫ್ಯೂ ತೆರವು ತೀರ್ಮಾನ ಇಲ್ಲ
ರಾಜ್ಯದಲ್ಲಿ ಜಾರಿಯಲ್ಲಿರುವ ರಾತ್ರಿ ಕರ್ಫ್ಯೂವನ್ನು ತೆರವುಗೊಳಿಸುವ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಇಂದು ಸಂಜೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತಿದ್ದೇನೆ. ಅವರ ಜತೆ ಎಲ್ಲ ವಿಚಾರಗಳನ್ನು ಚರ್ಚಿಸುತ್ತೇನೆ ಎಂದ ಅವರು, ಪಬ್‌ಗಳಿಗೆ ಅವಕಾಶ ಕೊಡುವ ಬಗ್ಗೆಯೂ ತೀರ್ಮಾನ ಆಗಿಲ್ಲ ಎಂದರು. ಸದ್ಯ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಮುಂದುವರೆದಿದೆ. ರಾತ್ರಿ ಕರ್ಫ್ಯೂ ತೆರವುಗೊಳಿಸುವ ತೀರ್ಮಾನಗಳು ಆಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.