ಮೈದುಂಬಿ ಹರಿಯುತ್ತಿರುವ ಜಯಮಂಗಲಿ-ಸುವರ್ಣಮುಖಿ ನದಿ

ಮಧುಗಿರಿ, ಆ. ೩- ತಾಲ್ಲೂಕಿನಲ್ಲಿ ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ಜೀವ ನದಿಗಳಾದ ಜಯಮಂಗಲಿ ಮತ್ತು ಸುವರ್ಣಮುಖಿ ನದಿಗಳು ಮೈದುಂಬಿ ಹರಿಯುತ್ತಿವೆ. ತಾಲ್ಲೂಕಿನ ಅತಿ ದೊಡ್ಡ ಕೆರೆಯಾದ ಬಿಜವರ ಕೆರೆಕೋಡಿ ಬಿದ್ದು, ನೀರು ಹರಿದಿದೆ.
ತಾಲ್ಲೂಕಿನ ಪುರವರ ಹೋಬಳಿಯಲ್ಲಿ ಹರಿಯುವ ಜಯಮಂಗಲಿ ನದಿ ತುಂಬಿ ಹರಿಯುತ್ತಿದ್ದು, ಕೋಡಗದಾಲ ಪಂಚಾಯಿತಿ ವ್ಯಾಪ್ತಿಯ ಚನ್ನಸಾಗರದ ಬಳಿಯಿರುವ ಚೆಕ್‌ಡ್ಯಾಂ ತುಂಬಿ ಮುಂದಕ್ಕೆ ಹರಿಯುತ್ತಿದೆ.
ಕಳೆದ ವರ್ಷದ ನವಂಬರ್ ತಿಂಗಳ ಹಿಂದೆ ಮುಂದೆ ಬಿದ್ದ ಭಾರಿ ಮಳೆಯಿಂದಾಗಿ, ನವಂಬರ್ ತಿಂಗಳಲ್ಲಿ ಜಯಮಂಗಲಿ ನದಿ ಹರಿದಿತ್ತು. ಕೊರಟಗೆರೆ ಮತ್ತು ಮಧುಗಿರಿ ತಾಲ್ಲೂಕಿನಲ್ಲಿ ನದಿ ಪಾತ್ರದಲ್ಲಿರುವ ಎಲ್ಲ ಚೆಕ್ ಡ್ಯಾಂಗಳೂ ತುಂಬಿ ಹರಿದು, ಆಂಧ್ರಪ್ರದೇಶದ ’ಪರಿಗಿ’ ಕೆರೆ ಸೇರಿತ್ತು.
ಕೊರಟಗೆರೆ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್, ಮಾಜಿ ಶಾಸಕ ಪಿ.ಸುಧಾಕರ್‌ಲಾಲ್ ರವರು ತಮ್ಮ ಬೆಂಬಲಿಗರು ಮತ್ತು ರೈತರೊಂದಿಗೆ ಆಗಮಿಸಿ ಗಂಗಾಪೂಜೆ ನೆರವೇರಿಸಿದ್ದಾರೆ.
ಹಿಂದಿನ ಮಳೆಗಾಲದಲ್ಲಿ ನದಿ ಹರಿದ ಕಾರಣ ಕೆರೆ-ಕಟ್ಟೆ, ಬಾವಿಗಳಲ್ಲಿ ನೀರು ತುಂಬಿ ಅಂತರ್ಜಲ ಹೆಚ್ಚಿದ್ದು ಕುಡಿಯುವ ನೀರಿನ ಬವಣೆಯೂ ನೀಗಿದೆ. ದನ-ಕರುಗಳಿಗೆ ಮೇವು ಕೂಡ ದೊರೆತಿದೆ. ಅಳಿವಿನಂಚಿನಲ್ಲಿದ್ದ ಅಡಿಕೆ ಮತ್ತು ತೆಂಗಿನ ತೋಟಗಳು ಉಳಿದುಕೊಂಡಿವೆ ಎಂದು ರೈತರು ಸಂತಸ ಹಂಚಿಕೊಂಡರು.
ಮಧುಗಿರಿ ವಿಧಾನಸಭಾ ಕ್ಷೇತ್ರದ ವೀರಾಪುರ -ಇಮ್ಮಡಗೊಂಡನಹಳ್ಳಿ ಬಳಿ ಕೆ.ಎನ್.ರಾಜಣ್ಣ ಶಾಸಕರಾಗಿದ್ದ ಅವಧಿಯಲ್ಲಿ ನಿರ್ಮಾಣಗೊಂಡ ಬೃಹತ್ ಚೆಕ್ ಡ್ಯಾಂ ಮೇಲೆ ತುಂಬಿ ಹರಿಯುತ್ತಿರುವ ಜಯಮಂಗಲಿ ನದಿ ಹರಿಯುತ್ತಿದ್ದು, ಪಿಡರ್ ಚಾನಲ್ ಮೂಲಕ ದೊಡ್ಡಮಾಲೂರು ಕೆರೆಗೆ ನೀರು ಹರಿಯುತ್ತಿದೆ.
ತಾಲ್ಲೂಕಿನ ಬಡವನಹಳ್ಳಿ ಸಮೀಪ ಸುವರ್ಣಮುಖಿ ನದಿಗೆ ಅಡ್ಡಲಾಗಿ ಐದಾರು ಚೆಕ್ ಡ್ಯಾಂಗಳನ್ನು ಶಾಸಕ ಎಂ.ವಿ. ವೀರಭದ್ರಯ್ಯ ನಿರ್ಮಿಸಿದ್ದು ಆ ಭಾಗದ ಜನರು ನದಿ ಹರಿಯುತ್ತಿರುವುದರ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.