ಮೈದಾನ ಉಳಿಸಿ ಹೋರಾಟಕ್ಕೆ ಎಬಿವಿಪಿ ಬೆಂಬಲ, ಸಿಎಂಗೆ ಪತ್ರ.ಮಾಜಿ ಸಿಎಂ ಗೂ ಮನವಿ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮಾ. 16 :-  ಪಟ್ಟಣದಲ್ಲಿ ಸರಕಾರಿ ಶಾಲಾ, ಕಾಲೇಜಿನ ಆಟದ ಮೈದಾನ ಉಳಿವಿಗಾಗಿ ಒತ್ತಾಯಿಸಿ ಮೈದಾನ ಹೋರಾಟ ಸಮಿತಿ ಹಾಗೂ ನಾಗರಿಕರು ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ನಿರಶನಕ್ಕೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಬುಧವಾರ ಬೆಂಬಲ ಸೂಚಿಸುವ ಮೂಲಕ ಮುಖ್ಯಮಂತ್ರಿಗೆ ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಿದರು.ಹಾಗೂ ಕೂಡ್ಲಿಗಿ ಯಲ್ಲಿ ನಿನ್ನೆ ಜರುಗಿದ ಬಿಜೆಪಿ ವಿಜಯಸಂಕಲ್ಪ ಯಾತ್ರೆಗೆ ಆಗಮಿಸಿದ ಮಾಜಿ ಸಿಎಂ ಜಗದೀಶ ಶೆಟ್ಟರ್ ಗೆ ಮನವಿ ಸಲ್ಲಿಸಲಾಯಿತು.
ಎಬಿವಿಪಿ ತಾಲೂಕು ಅಧ್ಯಕ್ಷ ಡಾ.ಪಿ.ಉಮೇಶ್ ಮಾತನಾಡಿ, ಸರಕಾರಿ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಪಟ್ಟಣದ ನಾಗರಿಕರಿಗೆ ಅನುಕೂಲವಾಗುವಂಥ ಮಹದೇವ ಮೈಲಾರ ಕ್ರೀಡಾಂಗಣ ಉಳಿಸಬೇಕೆಂಬ ಒತ್ತಡಕ್ಕೆ ಎಬಿವಿಪಿ ಬೆಂಬಲವಿದೆ. ಅಲ್ಲದೆ, ಈ ಶಾಲಾ ಆಟದ ಮೈದಾನವು ಕಳೆದ 75 ವರ್ಷಗಳಿಂದಲೂ ಸ್ವಾಧೀನದಲ್ಲಿದೆ ಎನ್ನುವುದಕ್ಕೆ ಸಾಕಷ್ಟು ದಾಖಲೆಗಳಿವೆ. ಅಲ್ಲದೆ, ಕಂದಾಯ ಇಲಾಖೆ ಆದೇಶವೂ ಇರುವುದರಿಂದ ಈಗಿರುವ ಆಟದ ಮೈದಾನವನ್ನು ಶಾಲಾ, ಕಾಲೇಜಿನ ಹೆಸರಿಗೆ ಖಾತೆ ಮಾಡಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಎಬಿವಿಪಿ ಕಾರ್ಯದರ್ಶಿ ಹನುಮಂತ, ಪ್ರಾಚಾರ್ಯ ಎಸ್.ಚಾರೇಶ್, ಉಪನ್ಯಾಸಕರಾದ ಮೋಹನ್ ಗಾಂಧಿ, ವಿವೇಕಾನಂದ ಸ್ವಾಮಿ, ಮೈದಾನ ಉಳಿಸಿ ಹೋರಾಟ ಸಮಿತಿಯ ಎ.ಎಂ.ರಾಘವೇಂದ್ರ,  ಸಂದೀಪ್ ರಾಯಸಂ, ವಾಲಿಬಾಲ್ ವೆಂಕಟೇಶ್, ಐಲಿ ರವಿ ಸೇರಿ ನೂರಾರು ವಿದ್ಯಾರ್ಥಿಗಳು ಇದ್ದರು.
ಮಾಜಿ ಮುಖ್ಯಮಂತ್ರಿಗೆ ಮನವಿ: ಕೂಡ್ಲಿಗಿಯಲ್ಲಿರುವ ಮಹದೇವ ಮೈಲಾರ ಕ್ರೀಡಾಂಗಣ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಪಟ್ಟಣದ ಗಾಂಧಿ ಚಿತಾಭಸ್ಮವಿರುವ ಹುತಾತ್ಮರ ರಾಷ್ಟಿಯ ಸ್ಮಾರಕದ ಬಳಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಹೋರಾಟ ಸಮಿತಿಯವರು ಮನವಿ ಸಲ್ಲಿಸಿ ಸಮಸ್ಯೆ ಕುರಿತು ವಿವರಿಸಿದರು. ಸರಕಾರಿ ಶಾಲಾ, ಕಾಲೇಜಿನ ಸ್ವಾಧೀನದಲ್ಲಿರುವ ಸ್ವತ್ತು, ಕಟ್ಟಡ ಹಾಗೂ ಜಮೀನುಗಳನ್ನು ಆಯಾಯ ಶಾಲಾ, ಕಾಲೇಜಿನ ಹೆಸರಿಗೆ ಖಾತೆ ಮಾಡುವಂತೆ ಕಂದಾಯ ಇಲಾಖೆ ಆದೇಶವಿದ್ದರೂ, ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹೋರಾಟ ಸಮಿತಿಯವರಾದ ಸಂದೀಪ್ ರಾಯಸಂ, ಎ.ಎಂ.ರಾಘವೇಂದ್ರ , ವಾಲಿಬಾಲ್ ವೆಂಕಟೇಶ್, ಐಲಿ ರವಿ ಸೇರಿ ಅನೇಕರು ಶೆಟ್ಟರ್ ಅವರಿಗೆ ತಿಳಿಸಿದರು. ಈ ಕುರಿತು ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಯೊಂದಿಗೆ ಮಾತಾಡುವುದಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿಳಿಸಿದರು.
ಈ ಸಂದರ್ಭದಲ್ಲಿ ಸಂಸದ ವೈ.ದೇವೇಂದ್ರಪ್ಪ, ಶಾಸಕ ಎನ್.ವೈ.ಗೋಪಾಲಕೃಷ್ಣ, ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಕೋಶಾಧ್ಯಕ್ಷ ಬಂಗಾರು ಹನುಮಂತು ಸೇರಿ ಇತರರಿದ್ದರು.