
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮಾ. 11 :- ಪಟ್ಟಣದ ಮಹಾದೇವ ಮೈಲಾರ ಕ್ರೀಡಾಂಗಣದ ಉಳಿವಿಗಾಗಿ ನಡೆಸುತ್ತಿರುವ ಹೋರಾಟಗಾರರು ನಿನ್ನೆ ಪಟ್ಟಣದ ಬಂಗಾರು ಹನುಮಂತು ಅವರ ಬಂಗಾರು ನಿಲಯ ಗೃಹಪ್ರವೇಶ ಹಾಗೂ ಸಾಮೂಹಿಕ ಕಾರ್ಯಕ್ರಮಕ್ಕೆ ಆಗಮಿಸಿದ ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಇಲಾಖೆ, ವಿದ್ಯುನ್ಮಾನ, ಐಟಿ ಮತ್ತು ಬಿಟಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ ಅಶ್ವಥ್ ನಾರಾಯಣ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜ್ ನ ಮಹಾದೇವ ಮೈಲಾರ ಕ್ರೀಡಾಂಗಣವನ್ನು ಕೆಲವರು ಸ್ವಹಿತಾಸಕ್ತಿಯಲ್ಲಿ ಅದನ್ನು ಭೂಪರಿವರ್ತನೆ ಮಾಡಿ ಮಾರಾಟ ಮಾಡಲು ಯತ್ನಿಸಿದ್ದು ಸರ್ಕಾರದ ಜಾಗವನ್ನು ಸರ್ಕಾರ ಉಳಿಸುವಲ್ಲಿ ಪಟ್ಟಣದ ಮೈದಾನ ಉಳಿವಿಗಾಗಿ ಹೋರಾಟ ಸಮಿತಿ ಅನಿರ್ದಿಷ್ಟ ನಿರಶನ ನಡೆಸುತ್ತಿದ್ದು ಇದರ ಸಂಪೂರ್ಣ ಮಾಹಿತಿಯನ್ನು ಹೋರಾಟ ಸಮಿತಿಯ ಎಂ ವೆಂಕಟೇಶ ಸವಿವರವಾಗಿ ಸಚಿವರಿಗೆ ತಿಳಿಸಿದ್ದರಿಂದ ನ್ಯಾಯ ಸಮ್ಮತ ಹೋರಾಟಕ್ಕೆ ನ್ಯಾಯ ಸಿಗಲಿದೆ ಎಂದು ಹೇಳಿದ ಸಚಿವರು ಕಂದಾಯ ಸಚಿವ ಆರ್ ಆಶೋಕ್ ಜೊತೆ ಮತ್ತು ಕಂದಾಯ ಇಲಾಖೆಯ ಕಾರ್ಯದರ್ಶಿಯೊಂದಿಗೆ ಚರ್ಚಿಸಿ ನ್ಯಾಯ ಸಮ್ಮತ ಹೋರಾಟಕ್ಕೆ ನ್ಯಾಯ ಸಿಗುವಂತೆ ಮಾಡುವುದಾಗಿ ಹೋರಾಟಗಾರರ ಮನವಿಗೆ ಸ್ಪಂದಿಸಿ ಭರವಸೆ ನುಡಿಯನ್ನು ಸಚಿವರು ನುಡಿದರು.
ಈ ಸಂದರ್ಭದಲ್ಲಿ ಕೂಡ್ಲಿಗಿ ಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿ ಬಂಗಾರು ಹನುಮಂತು, ಮೈದಾನ ಉಳಿವಿಗಾಗಿ ಹೋರಾಟ ಸಮಿತಿಯ ಸಂದೀಪ ರಾಯಸಂ, ಐಲಿ ರವಿ, ಹಾಗೂ ಇತರರು ಉಪಸ್ಥಿತರಿದ್ದರು.