ಮೈತ್ರಿ ಸರ್ಕಾರ ಪತನಕ್ಕೆ ಮಾಜಿ ಸಿಎಂಗಳು ಕಾರಣ

ಮೈಸೂರು. ಡಿ:20: ಮೈತ್ರಿ ಸರ್ಕಾರ ಪತನಕ್ಕೆ ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಇಬ್ಬರೂ ಕಾರಣ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ.
ಇಂದು ಬೆಳಿಗೆ ಮೈಸೂರು ತಾಲೂಕಿನ ಸಿದ್ದಲಿಂಗಪುರದಲ್ಲಿ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ದರ್ಶನ ಮಾಡಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡುತ್ತಾ ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ವಾಗ್ವಾದ ವಿಚಾರ ಕುರಿತು ಜಿ.ಟಿ.ದೇವೇಗೌಡ, ಮೈತ್ರಿ ಸರ್ಕಾರ ಬೀಳುತ್ತೆ ಅಂತ ಗೊತ್ತಿತ್ತು. ಗೊತ್ತಿದ್ದರೂ ಕುಮಾರಸ್ವಾಮಿ ಅಮೆರಿಕಾಕ್ಕೆ ಹೋಗಿ ಕುಳಿತುಕೊಂಡರು. ಶಾಸಕರು ಬಿಟ್ಟು ಹೋಗುತ್ತಾರೆ ಅಂತ ಸಿದ್ದರಾಮಯ್ಯ ಅವರಿಗೂ ಗೊತ್ತಿತ್ತು ಎಂದಿದ್ದಾರೆ.
ಮನಸ್ಸು ಮಾಡಿದ್ದರೆ ತಡೆಯಬಹುದಿತ್ತು. ಆದರೆ, ತಡೆಯುವ ಪ್ರಯತ್ನ ಮಾಡಲಿಲ್ಲ. ಆದ್ದರಿಂದ ಮೈತ್ರಿ ಸರ್ಕಾರ ಬೀಳುವುದಕ್ಕೆ ಇಬ್ಬರೂ ಕಾರಣಕರ್ತರು ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಉಂಟಾದ ಸೋಲು ಮರ್ಮಾಘಾತವನ್ನುಂಟು ಮಾಡಿದೆ ಎಂದು ಜಿ.ಟಿ.ದೇವೇಗೌಡ ತಿಳಿಸಿದರು. ಸಿದ್ದರಾಮಯ್ಯರವರು ತಮ್ಮ ಮನಸ್ಸಿನ ನೋವನ್ನು ಹೇಳಿಕೊಂಡಿದ್ದಾರೆ. ಈ ಮೊದಲು ವರುಣ, ಚಾಮುಂಡೇಶ್ವರಿ ಒಂದೇ ಕ್ಷೇತ್ರವಾಗಿತ್ತು. ತಾಲ್ಲೂಕು ಬೋರ್ಡ್ ಮೆಂಬರ್ ನಿಂದ ಹಿಡಿದು ಉಪ ಮುಖ್ಯಮಂತ್ರಿ ಆಗುವವರೆಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಇದ್ದರು ಎಂದು ವಿವರಿಸಿದರು.
ವರುಣ ಕ್ಷೇತ್ರ ಉದಯವಾದ ನಂತರ ಅಲ್ಲಿಗೆ ಹೋಗಿ ಗೆದ್ದು ಮುಖ್ಯಮಂತ್ರಿಯಾದರು. ಆದರೂ ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿ ಆಗಬೇಕೆಂದು ಬಯಸಿದ್ದರು. ಆದರೆ, ಜನ ಅವರನ್ನು ಕೈ ಹಿಡಿಯಲಿಲ್ಲ. ನೀವೇ ನನ್ನನ್ನು ಕೈ ಬಿಟ್ಟಿರಿ ಎಂದು ಕಾರ್ಯಕರ್ತರ ಬಳಿ ನೋವನ್ನು ಹೇಳಿಕೊಂಡಿದ್ದಾರೆ ಎಂದು ಜಿ.ಟಿ.ದೇವೇಗೌಡ ಹೇಳಿದರು.
ಜೆಡಿಎಸ್ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದ್ದವು ಎಂಬ ವಿಚಾರ. ಬಿಜೆಪಿಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ 2013ರ ಚುನಾವಣೆಯಲ್ಲಿ 8 ಸಾವಿರ ಮತ ಪಡೆದಿತ್ತು. ಆಗ ಹೇಮಂತ್ ಕುಮಾರ್ ಗೌಡ ಅಭ್ಯರ್ಥಿಯಾಗಿದ್ದರು. 2018 ರ ಚುನಾವಣೆಯಲ್ಲಿ ಗೋಪಾಲ್ ರಾವ್ ಅಭ್ಯರ್ಥಿಯಾಗಿದ್ದರು. ಬಿಜೆಪಿ 15 ಸಾವಿರ ಮತ ಪಡೆಯಿತು. ನಾನು ಸ್ಪರ್ಧಿಸಿದ್ದ ಚುನಾವಣೆಯಲ್ಲಿ ಬಿಜೆಪಿ ಡಬಲ್ ಓಟ್ ಪಡೆದುಕೊಂಡಿದೆ. ಪರೋಕ್ಷವಾಗಿ ಜೆಡಿಎಸ್ ಬಿಜೆಪಿ ಒಳ ಒಪ್ಪಂದವನ್ನು ಜಿ. ಟಿ.ದೇವೇಗೌಡ ಅಲ್ಲಗೆಳೆದರು.