ಮೈತ್ರಿ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಯತ್ನ: ಖರ್ಗೆ ಯತ್ನ

ನವದೆಹಲಿ, ಜೂ.23- ಮಹಾರಾಷ್ಟ್ರದಲ್ಲಿ ಸದೃಢವಾಗಿದ್ದ ಮಹಾವಿಕಾಸ್ ಆಘಾಡಿ ಮೈತ್ರಿಕೂಟದ ಸರ್ಕಾರ ಅಸ್ಥಿರಗೊಳ್ಳುತ್ತಿರುವುದಕ್ಕೆ ಬಿಜೆಪಿ ಮತ್ತು ಕೇಂದ್ರ ಸರ್ಕಾರವೇ ಸಂಪೂರ್ಣ ಹೊಣೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಇವೆಲ್ಲವನ್ನೂ ರಾಷ್ಟ್ರಪತಿ ಚುನಾವಣೆಗೋಸ್ಕರ ಮಾಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಮಹಾರಾಷ್ಟ್ರ ಸರ್ಕಾರ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದೆ. ಆದರೆ, ಬಿಜೆಪಿ ಆ ಸರ್ಕಾರವನ್ನು ಅಸ್ಥಿರಗೊಳ್ಳಿಸಲು ಪ್ರಯತ್ನಿಸುತ್ತಿದೆ. ಇದನ್ನೇ ಈ ಹಿಂದೆ ಕರ್ನಾಟಕ, ಮಧ್ಯಪ್ರದೇಶ ಮತ್ತು ಗೋವಾದಲ್ಲೂ ಅವರು ಮಾಡಿದ್ದರು. ಈಗ ಮಹಾರಾಷ್ಟ್ರದಲ್ಲೂ ತಮ್ಮ ಸರ್ಕಾರ ರಚಿಸಲು ಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್​ ಪಕ್ಷ ಮಹಾವಿಕಾಸ್ ಆಘಾಡಿ ಮೈತ್ರಿಕೂಟದ ಜೊತೆಗಿದೆ. ನಾವು ಒಟ್ಟಾಗಿ ಕೆಲಸ ಮಾಡಲು ಬಯಸುತ್ತೇವೆ. ಕಾಂಗ್ರೆಸ್​, ಶಿವಸೇನೆ ಮತ್ತು ಎನ್​ಸಿಪಿ ಎಲ್ಲರೂ ಕೂಡಿಕೊಂಡು ನಮ್ಮ ಮೈತ್ರಿಕೂಟವನ್ನು ಇನ್ನಷ್ಟು ಗಟ್ಟಿಗೊಳ್ಳಿಸಬೇಕೆಂದು ತಿಳಿಸಿದರು.