ಮೈತ್ರಿ ಮಾಹಿತಿ ಇಲ್ಲ: ಜೋಶಿ

ಹುಬ್ಬಳ್ಳಿ, ಸೆ 11: ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮೈತ್ರಿ ವಿಚಾರವಾಗಿ ಸಮರ್ಥನೆ ಮಾಡಿಕೊಂಡಿರುವ ವಿಚಾರವಾಗಿ ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಅನಿವಾರ್ಯ ಎಂದು ಬೊಮ್ಮಾಯಿ ಅವರು ಸ್ಥಳೀಯವಾಗಿ ಹೇಳಿರಬಹುದು. ಕೇಂದ್ರದ ಸಚಿವನಾದ ನನಗೆ ನಮ್ಮ ಪಕ್ಷದ ವರಿಷ್ಠರು ಹೇಳುವವರೆಗೆ ನಾನು ನನ್ನ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ ಎಂದರು.
ಖಾಸಗಿ ಬಸ್ ಮಾಲೀಕರು ಅನುಭವಿಸುತ್ತಿರುವ ತೊಂದರೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಖಾಸಗಿ ಬಸ್ ಮಾಲೀಕರ ತೊಂದರೆ ನಿವಾರಿಸುವ ಕೆಲಸ ರಾಜ್ಯ ಸರ್ಕಾರದಿಂದ ಆಗಬೇಕು. ಕೆ.ಎಸ್‍ಆರ್.ಟಿ.ಸಿ ಕೂಡ ನಷ್ಟದಲ್ಲಿದ್ದು, ಸರ್ಕಾರ ದುಡ್ಡು ಕೊಡುತ್ತಿಲ್ಲ. ಈ ಬಗ್ಗೆಯೂ ಸರ್ಕಾರ ಗಮನ ಹರಿಸಬೇಕು ಎಂದರು.
ಜಿ-20 ಶೃಂಗಸಭೆ ಭಾರತದ ಇತಿಹಾಸದಲ್ಲಿ ಭಾರಿ ದೊಡ್ಡ ಮೈಲುಗಲ್ಲಾಗಿದ್ದು, ಬಹು ದೊಡ್ಡ ಸಾಧನೆಯಾಗಿದೆ. ಆಫ್ರಿಕನ್ ಒಕ್ಕೂಟ ಒಗ್ಗೂಡಿಸಲು ಭಾರತದ ಪ್ರಸ್ತಾವನೆ ಬಂದಾಗ ಎಲ್ಲರೂ ಸ್ವೀಕಾರ ಮಾಡಿದ್ದಾರೆ. ಭಾರತದ ಎಲ್ಲ ಸಲಹೆಗಳನ್ನು ಮಾನ್ಯ ಮಾಡಿದ್ದಾರೆ. ಎಲ್ಲವೂ ಅಚ್ಚುಕಟ್ಟಾಗಿ ನಡೆದಿದೆ ಎಂದು ಅವರು ಹೇಳಿದರು.