ಮೈತ್ರಿ ಅಭ್ಯರ್ಥಿ ಹೆಚ್.ಡಿ.ಕೆ ಪರ ಶಾಸಕ ಮಂಜು ಮತಯಾಚನೆ

Oplus_0

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಏ.19: ಜಿಲ್ಲೆಯ ಮತದಾರರ ಸೇವೆ ಮಾಡದೆ ಅವರ ಕಷ್ಟಸುಖಗಳಲ್ಲಿ ಭಾಗಿಯಾಗದೆ ಎಲ್ಲೋ ಇದ್ದು ದಿಢೀರ್ ಎಂದು ಹಣಬಲದಿಂದ ಚುನಾವಣೆಗೆ ನಿಂತರೆ ಮತದಾರರು ಎಂದಿಗೂ ಅವರುಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಶಾಸಕ ಹೆಚ್.ಟಿ.ಮಂಜು ತಿಳಿಸಿದರು.
ಅವರು ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಕೈಗೋನಹಳ್ಳಿ, ಜಾಗಿನಕೆರೆ, ಚಿಕ್ಕಹಾರನಹಳ್ಳಿ, ಶಾರಹಳ್ಳಿ, ಗೊರವಿ, ಬಿಲ್ಲೇನಹಳ್ಳಿ, ಅಪ್ಪನಹಳ್ಳಿ, ಬಿಕ್ಕಸಂದ್ರ, ಮಾಳಗೂರು, ನಾಗರಘಟ್ಟ, ಯಲ್ಲಾದಹಳ್ಳಿ, ಕುಂದೂರು, ಕೊರಟಿಕೆರೆ ಸೇರಿದಂತೆ ಹಲವಾರು ಗ್ರಾಮಗಳಿಗೆ ಮನ್ ಮುಲ್ ನಿರ್ದೇಶಕ ಡಾಲುರವಿ ಯವರೊಂದಿಗೆ ತೆರಳಿ ಮೈತ್ರಿ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ ಪರ ಮನೆಮನೆಗಳಿಗೆ ತೆರಳಿ ಮತಯಾಚನೆ ಮಾಡಿ ಮಾತನಾಡಿದರು.
ಜಿಲ್ಲೆಯ ಜೀವನದಿಯಾಗಿರುವ ಕಾವೇರಿ ನೀರನ್ನು ತಮಿಳುನಾಡಿಗೆ ನಿರಂತರವಾಗಿ ಹರಿಸಿ ಇಲ್ಲಿನ ರೈತರಿಗೆ ಮಕ್ಮಲ್ ಟೋಪಿ ಹಾಕಿದ್ದೀರಿ, ಯಾವ ಅಭಿವೃದ್ಧಿ ಕೆಲಸ ಮಾಡಿದ್ದೇವೆ ಎಂದು ಮತ ಕೇಳಲು ಬರುತ್ತೀರಿ, ಜಿಲ್ಲೆಯ ರೈತರು ಕಾವೇರಿ ನದಿ ನೀರು ಹರಿದುಹೋಗುತ್ತಿರುವುದನ್ನು ಕಣ್ಣಾರೆ ಕಂಡು ವಿವಿಧ ಚಳುವಳಿ, ಸತ್ಯಾಗ್ರಹ ಮುಂತಾದುವುಗಳನ್ನು ಮಾಡಿದರೂ ಅವುಗಳಿಗೆ ಬೆಲೆ ನೀಡದೇ ರೈತರ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕಿದ ಕಾಂಗ್ರೆಸ್ ಪಕ್ಷವನ್ನು ಜಿಲ್ಲೆಯ ಜನತೆ ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಪಾಂಡವಪುರ, ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು ತಾಲ್ಲೂಕಿನಲ್ಲಿ ರೈತರು ಬೆಳೆದ ಬೆಳೆಗಳಿಗೆ ನೀರಿಲ್ಲದೇ ಒಣಗುತ್ತಿವೆ. ನಾಗಮಂಗಲ, ಕೆ.ಆರ್.ಪೇಟೆ ಕೆ,ಆರ್,ನಗರ ತಾಲ್ಲೂಕಿನಲ್ಲಿ ಮಳೆ ಇಲ್ಲದೇ ತೆಂಗು, ಅಡಿಕೆ, ತೋಟಗಾರಿಕಾ ಬೆಳೆಗಳು ಒಣಗುತ್ತಿವೆ. ಜನಜಾನುವಾರುಗಳಿಗೆ ಕುಡಿಯಲು ನೀರಿಲ್ಲದೇ ರೈತರು ಕಂಗಾಲಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದ ನಂತರ ಬಡರೈತರು, ಕೂಲಿಕಾರ್ಮಿಕರು ಕುಡಿಯುತ್ತಿದ್ದ ಮದ್ಯದ ಬೆಲೆಯನ್ನು 3-4 ಬಾರಿ ಏರಿಕೆ ಮಾಡಿದ್ದೀರಿ, ರೈತರು ತಮ್ಮ ಪಹಣಿ ಪಡೆಯಲು 25 ರೂಪಾಯಿ ತೆರಬೇಕಾಗಿದೆ. ನೊಂದಣಿ ಮತ್ತು ಮುದ್ರಾಂಕದ ಶುಲ್ಕವನ್ನು ಏರಿಸಿ ರೈತರಿಗೆ ಬರೆ ಎಳೆದಿದ್ದೀರಿ, ಕಿಸಾನ್ ಸಮ್ಮಾನ್ ಯೋಜನೆಯ 4000 ಹಣವನ್ನು ನಿಲ್ಲಿಸಿ ರೈತರಿಗೆ ಮೋಸ ಮಾಡಿದ್ದೀರಿ, ರಾಜ್ಯಸರ್ಕಾರ ತನ್ನ ಯೋಜನೆಗಳ ಜಾರಿಗೊಳಿಸುವ ನಿಟ್ಟಿನಲ್ಲಿ 1.05 ಲಕ್ಷ ಸಾವಿರ ಕೋಟಿ ಸಾಲ ಮಾಡಿ ಸಾಲದ ಹೊರೆಯನ್ನು ರೈತರ ಮೇಲೆ ಹೊರಿಸಿದ್ದೀರಿ ಇಷ್ಟೆಲ್ಲಾ ಕೆಲಸ ಮಾಡಿರುವ ನಿಮಗೆ ಮತದಾರರು ಹೇಗೆ ತಾನೆ ಮತ ಹಾಕುತ್ತಾರೆ ಎಂದು ಪ್ರಶ್ನಿಸಿದರು.
ಮನ್ ಮುಲ್ ನಿರ್ದೇಶಕ ಡಾಲುರವಿ ಮಾತನಾಡಿ ಗ್ಯಾರಂಟಿ ಯೋಜನೆಗಳಿಗೆ ಮರುಳಾಗಿ ನೀವುಗಳು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಡಿ. ಕಾಂಗ್ರೆಸ್ ಪಕ್ಷದ ಹಲವು ಶಾಸಕರುಗಳೇ ಹಲವು ವೇದಿಕೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತನೀಡಿ ಗೆಲ್ಲಿಸದಿದ್ದರೆ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕಾಗುತ್ತದೆ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಈ ಯೋಜನೆಗಳು ಶಾಶ್ವತವಾದ ಯೋಜನೆಗಳಲ್ಲಿ. ಕುಮಾರಣ್ಣನವರ ಕಾರ್ಯಕ್ರಮಗಳು ನಿಮ್ಮ ಬದುಕನ್ನು ಹಸನು ಮಾಡುವ ಕಾರ್ಯಕ್ರಮಗಳಾಗಿದ್ದು ಮೋದಿಯವರು ಭಾರತದ ಪ್ರಧಾನಿಗಳಾಗಿ ಇಡೀ ವಿಶ್ವವೇ ಮೆಚ್ಚುವಂಥಹ ಆಡಳಿತ ನಡೆಸುತ್ತಿದ್ದಾರೆ. ಭಾರತದ ಆರ್ಥಿಕತೆಯನ್ನು ಇಡೀ ವಿಶ್ವವೇ ಶ್ಲಾಘನೆ ಮಾಡುತ್ತಿವೆ. ಭ್ರಷ್ಟಾಚಾರ ರಹಿತವಾದ ಆಡಳೀತ ನಡೆಸುತ್ತಿರುವ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಹಾಗೂ ದೇಶಕಟ್ಟುವ ಕೆಲಸಕ್ಕೆ ನಿಮ್ಮೆಲ್ಲರ ಸಹಕಾರ ಬೇಕಾಗಿದೆ, ನಿಮ್ಮ ಒಂದು ಮತ ಪ್ರಜಾಪ್ರಭುತ್ವದ ಮೆಟ್ಟಿಲನ್ನು ಏರುವಂತೆ ಮಾಡುತ್ತದೆ. ಮುಗ್ದ ಮನಸ್ಸಿನ ಜನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಮೈತ್ರಿ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿಯವರ ಕ್ರಮ ಸಂಖ್ಯೆ 01 ತೆನೆಹೊತ್ತ ಮಹಿಳೆಯ ಗುರುತಿಗೆ ನಿಮ್ಮ ಅಮೂಲ್ಯವಾದ ಮತ ನೀಡಿ ಅವರನ್ನು ಕೇಂದ್ರದ ಮಂತ್ರಿಯನ್ನಾಗಿ ಮಾಡಿ ನಾಡಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳೋಣ ಎಂದರು.