ಬೆಂಗಳೂರು, ಅ. ೧೦- ಜೆಡಿಎಸ್ ಜತೆಗೆ ಬಿಜೆಪಿ ಮಾಡಿಕೊಂಡಿರುವ ಮೈತ್ರಿಗೆ ಪಕ್ಷದಲ್ಲಿ ಕೇಳಿ ಬರುತ್ತಿರುವ ಅಪಸ್ವರ, ಅಸಮಾಧಾನಗಳನ್ನು ಮೊಳಕೆಯಲ್ಲೇ ಚಿವುಟಿ ಹಾಕಲು ಮುಂದಾಗಿರುವ ಬಿಜೆಪಿ ವರಿಷ್ಠರು ಜೆಡಿಎಸ್ ಜತೆಗಿನ ಮೈತ್ರಿ ಬಗ್ಗೆ ಯಾರೂ ಬಹಿರಂಗವಾಗಿ ಮಾತನಾಡದಂತೆ ತಾಕೀತು ಮಾಡಿದ್ದಾರೆ.
ರಾಷ್ಟ್ರ ರಾಜಕಾರಣವನ್ನು ಗಮನದಲ್ಲಿಟ್ಟುಕೊಂಡು ವರಿಷ್ಠ ಮಟ್ಟದಲ್ಲಿ ಮೈತ್ರಿಯ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ವರಿಷ್ಠರ ಈ ತೀರ್ಮಾನವನ್ನು ಬಿಜೆಪಿಯ ಪ್ರತಿಯೊಬ್ಬ ನಾಯಕರು ಗೌರವಿಸಬೇಕು. ಮೈತ್ರಿ ಬಗ್ಗೆ ಬಹಿರಂಗವಾಗಿ ಅಸಮಾಧಾನ, ಅತೃಪ್ತಿ ಹೊರ ಹಾಕಬಾರದು. ಒಂದು ವೇಳೆ ಮೈತ್ರಿ ಬಗ್ಗೆ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದರೆ ಅದನ್ನು ಪಕ್ಷದ ಶಿಸ್ತು ಉಲ್ಲಂಘನೆ ಎಂಬುದಾಗಿ ಪರಿಗಣಿಸಬೇಕಾಗುತ್ತದೆ ಎಂದು ವರಿಷ್ಠರು ಎಚ್ಚರಿಕೆ ನೀಡಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿದ್ದೇವೆ. ಈ ಮೈತ್ರಿ ಬಗ್ಗೆ ಅಪಸ್ವರ, ಅಸಮಾಧಾನ ಸರಿಯಲ್ಲ. ಪಕ್ಷದ ಹಿತದೃಷ್ಠಿಯಿಂದ ಮಾಡಿಕೊಂಡಿರುವ ಮೈತ್ರಿಯನ್ನು ಗೌರವಿಸಿ, ನಿಮ್ಮ ಯಾವುದೇ ಅಸಮಾಧಾನ ಇದ್ದರೂ ಅದನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಿ, ಅದು ಬಿಟ್ಟು ಬಹಿರಂಗವಾಗಿ ಮಾತನಾಡಿ ಪಕ್ಷಕ್ಕೆ ಮುಜುಗರ ತರಬೇಡಿ ಎಂದು ವರಿಷ್ಠರು ರಾಜ್ಯ ಬಿಜೆಪಿ ನಾಯಕರುಗಳಿಗೆ ಕಟ್ಟಾಜ್ಞೆ ಮಾಡಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಮೊದಲಿಗೆ ಶಾಸಕ ಎಸ್.ಟಿ. ಸೋಮಶೇಖರ್ ಅಪಸ್ವರ ಎತ್ತಿದ್ದರು. ನಂತರ ಸಂಸದ ಡಿ.ವಿ. ಸದಾನಂದಗೌಡ, ಬಿ.ಎನ್. ಬಚ್ಚೇಗೌಡ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕ ಪ್ರೀತಂಗೌಡ ಸೇರಿದಂತೆ ರಾಜ್ಯದ ಹಲವು ನಾಯಕರುಗಳು ಮೈತ್ರಿಗೆ ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದ್ದರು.
ಈ ಮೈತ್ರಿಯಿಂದ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಶಕ್ತಿ ಕುಂದುತ್ತದೆ. ಬಿಜೆಪಿಯಲ್ಲಿನ ಒಕ್ಕಲಿಗ ನಾಯಕರ ಮಾತಿಗೆ ಕಿಮ್ಮತ್ತು ಇರುವುದಿಲ್ಲ. ಮೈತ್ರಿ ಬೇಕಾಗಿರಲಿಲ್ಲ ಎಂದು ಸಂಸದ ಡಿ.ವಿ. ಸದಾನಂದಗೌಡ ಅಸಮಾಧಾನ ಹೊರ ಹಾಕಿದ್ದರು. ಇದಕ್ಕೆ ಹಲವು ನಾಯಕರುಗಳು ಧ್ವನಿಗೂಡಿಸಿದ್ದರು.
ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ಮೈತ್ರಿ ಬಗ್ಗೆ ಆಕ್ರೋಶ ಹೊರ ಹಾಕಿ, ಬಿಜೆಪಿಯನ್ನು ವಿಸರ್ಜಿಸುವುದೇ ಒಳ್ಳೆಯದು ಎಂಬ ಕಟು ಹೇಳಿಕೆಯನ್ನು ನೀಡಿದ್ದರು.
ಜೆಡಿಎಸ್ ಜತೆಗಿನ ಮೈತ್ರಿಗೆ ಪಕ್ಷದಲ್ಲಿ ಅಸಮಾಧಾನಗಳು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ ಹೈಕಮಾಂಡ್ ಮೊಳಕೆಯಲ್ಲೇ ಈ ಅಸಮಾಧಾನ, ಅತೃಪ್ತಿಯನ್ನು ಚಿವುಟಿ ಹಾಕಲು ನಿರ್ಧರಿಸಿ, ಮೈತ್ರಿ ಬಗ್ಗೆ ಮಾತನಾಡದಂತೆ ರಾಜ್ಯ ನಾಯಕರಿಗೆ ಸಂದೇಶ ಕಳುಹಿಸಿದೆ.
ವರಿಷ್ಠರ ಸೂಚನೆಗೆ ಕಿಮ್ಮತ್ತು ನೀಡಿ ರಾಜ್ಯ ಬಿಜೆಪಿ ನಾಯಕರು ಮೈತ್ರಿ ಬಗ್ಗೆ ಮಾತನಾಡದೆ ಬಾಯಿಗೆ ಬೀಗ ಹಾಕಿಕೊಳ್ಳುತ್ತಾರೆಯೇ ಎಂಬುದನ್ನು ಕಾಡು ನೋಡಬೇಕಿದೆ.
ರಾಷ್ಟ್ರ ರಾಜಕಾರಣದಿಂದ ಮೈತ್ರಿ
ಮೈತ್ರಿ ಬಗ್ಗೆ ಮಾತನಾಡದಂತೆ ಎಚ್ಚರಿಕೆ ನೀಡಿರುವ ವರಿಷ್ಠರು ರಾಜಕಾರಣವನ್ನು ಗಮನದಲ್ಲಿಟ್ಟುಕೊಂಡು ಮೈತ್ರಿ ಮಾಡಿಕೊಂಡಿದ್ದೇವೆ. ಕಾಂಗ್ರೆಸ್ ಸಹ ತನ್ನ ಎಲ್ಲ ಅಸಮಾಧಾನಗಳನ್ನು ಮರೆತು ಎಲ್ಲ ಪಕ್ಷಗಳನ್ನು ಒಗ್ಗೂಡಿಸಿ ಇಂಡಿಯಾ ಮೈತ್ರಿಕೂಟ ಮಾಡಿಕೊಂಡಿದೆ. ಹೀಗಿರುವಾಗ ಬಿಜೆಪಿ ಸಹ ರಾಷ್ಟ್ರಮಟ್ಟದಲ್ಲಿ ತನ್ನ ಬಲವನ್ನು ಗಟ್ಟಿಗೊಳಿಸಲು ಪ್ರಾದೇಶಿಕ ಪಕ್ಷಗಳ ಜತೆ ಮೈತ್ರಿಗೆ ಮುಂದಾಗಿದೆ. ೨೦೨೪ರ ಲೋಕಸಭಾ ಚುನಾವಣೆಗಳಲ್ಲಿ ಒಂದೊಂದು ಕ್ಷೇತ್ರದ ಗೆಲುವು ಅತಿ ಮುಖ್ಯ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡೇ ಮೈತ್ರಿ ಮಾಡಿಕೊಂಡಿದ್ದೇವೆ. ಮೈತ್ರಿ ಬಗ್ಗೆ ಮಾತನಾಡದೆ ಗಪ್‌ಚುಪ್ ಆಗಿರಿ ಎಂದು ರಾಜ್ಯ ಬಿಜೆಪಿ ನಾಯಕರಿಗೆ ವರಿಷ್ಠರು ಸೂಚಿಸಿದ್ದಾರೆ.
ಬಿಜೆಬಿ-ಜೆಡಿಎಸ್ ಮೈತ್ರಿಯಿಂದ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಬಹುದು. ಎಲ್ಲವನ್ನು ಅಳೆದು-ತೂಗಿಯೇ ನಿರ್ಧಾರ ಮಾಡಲಾಗಿದೆ. ಇದನ್ನು ಅರ್ಥ ಮಾಡಿಕೊಂಡು ವರಿಷ್ಠರ ತೀರ್ಮಾನವನ್ನು ಗೌರವಿಸಿ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ ಎಂದು ಹೈಕಮಾಂಡ್ ರಾಜ್ಯ ಬಿಜೆಪಿ ನಾಯಕರಿಗೆ ಹೊರಡಸಿರುವ ಸಂದೇಶದಲ್ಲಿ ಹೇಳಿದೆ.
ರಾಷ್ಟ್ರ ರಾಜಕಾರಣದ ಪರಿಸ್ಥಿತಿ ಬದಲಾಗಿದೆ. ಬದಲಾದ ಪರಿಸ್ಥಿತಿಗೆ ತಕ್ಕಂತೆ ಬಿಜೆಪಿ ಸಹ ಎಲ್ಲ ರಾಜ್ಯಗಳಲ್ಲೂ ಆಯಾ ರಾಜ್ಯಗಳಲ್ಲಿ ಪ್ರಬಲವಾಗಿರುವ ಪ್ರಾದೇಶಿಕ ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳುತ್ತಿದೆ. ಅದರಂತೆ ರಾಜ್ಯದಲ್ಲೂ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿದ್ದೇವೆ. ಈ ಮೈತ್ರಿ ಸರಿಯಲ್ಲ ಎಂದು ಅಪಸ್ವರ ತೆಗೆಯುವುದು ಬೇಡ ಎಂದು ಹೈಕಮಾಂಡ್ ಸ್ಪಷ್ಟ ಸಂದೇಶವನ್ನು ಕಳುಹಿಸಿದೆ.
ಮೈತ್ರಿಯಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ
ಈ ಮೈತ್ರಿಯಿಂದ ಬಿಜೆಪಿಗೆ ಹೆಚ್ಚು ಸ್ಥಾನಗಳನ್ನು ಗೆಲ್ಲಲ್ಲು ಸಾಧ್ಯವಾಗುತ್ತದೆ ಎಂದು ಹೈಕಮಾಂಡ್ ಹೇಳಿದೆ.