ಮೈತ್ರಿಗೆ ಕಮಲ-ತೆನೆ ನಾಯಕರ ಅಪಸ್ವರ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಸೆ.೧೪:ಬಿಜೆಪಿ-ಜೆಡಿಎಸ್ ಮೈತ್ರಿಗೆ ಎರಡೂ ಪಕ್ಷಗಳಲ್ಲೂ ಕೆಲ ನಾಯಕರು ಅಪಸ್ವರ ತೆಗೆದಿದ್ದು, ಮೈತ್ರಿಗೆ ಆರಂಭಿಕ ವಿಘ್ನ ಎದುರಾದಂತಾಗಿದೆ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಳ್ಳುತ್ತಿರುವುದು ನಿಶ್ಚಿತವಾಗಿರುವಾಗಲೇ ಎರಡೂ ಪಕ್ಷಗಳಲ್ಲೂ ಕೆಲ ಮುಖಂಡರು ಮೈತ್ರಿಗೆ ಒಳಗೊಳಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಸ್ಪರ ಎದುರು ನಿಂತು ಹೋರಾಡಿದ್ದೇವೆ. ಹೀಗಿರು ವಾಗ ಮೈತ್ರಿಯಿಂದ ತಳಮಟ್ಟದ ಕಾರ್ಯಕರ್ತರಿಗೆ ಕಷ್ಟವಾಗುತ್ತದೆ ಎಂಬ ಅಭಿಪ್ರಾಯಗಳನ್ನು ಕೆಲ ನಾಯಕರುಗಳು ಪಕ್ಷದ ವೇದಿಕೆಗಳಲ್ಲಿ ವ್ಯಕ್ತಪಡಿಸಿದ್ದಾರೆ.ಬಿಜೆಪಿ-ಜೆಡಿಎಸ್ ಮೈತ್ರಿಗೆ ಎರಡೂ ಪಕ್ಷಗಳ ಕೆಲ ಹಾಲಿ ಶಾಸಕರು ವಿರೋಧ ವ್ಯಕ್ತಪಡಿಸಿದ್ದು, ಮೈತ್ರಿ ಅಗತ್ಯವಿರಲಿಲ್ಲ. ಕೆಲ ಹಿರಿಯ ನಾಯಕರುಗಳು ತಮ್ಮ ಲಭಕ್ಕಾಗಿ ಮೈತ್ರಿ ಮಾಡಿ ಕೊಳ್ಳುತ್ತಿದ್ದಾರೆ. ಇದು ಪಕ್ಷದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಅಭಿಪ್ರಾಯಗಳನ್ನು ಎರಡೂ ಪಕ್ಷಗಳ ಕೆಲ ನಾಯಕರುಗಳು ಹೊರ ಹಾಕಿದ್ದಾರೆ.
ಜೆಡಿಎಸ್‌ನಲ್ಲಿ ಕೆಲ ಹಾಲಿ ಶಾಸಕರೇ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದು, ಬಿಜೆಪಿ ಜತೆ ಮೈತ್ರಿ ಬೇಡ, ಮೈತ್ರಿಯಾದರೆ ಮುಂದೆ ನಮಗೆ ಚುನಾವಣಾ ರಾಜಕೀಯ ನಡೆಸುವುದು ಕಷ್ಟವಾಗುತ್ತದೆ. ಮೈತ್ರಿ ಮಾಡಿಕೊಂಡರೆ ನಾವು ಬೇರೆ ದಾರಿಯನ್ನು ನೋಡಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದು, ಕೆಲ ಶಾಸಕರು ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ನತ್ತ ಮುಖ ಮಾಡಿದರು ಅಚ್ಚರಿಯೇನಲ್ಲ.ಭವಿಷ್ಯದಲ್ಲಿ ಒಳ್ಳೆಯದಾಗುತ್ತದೆ ಮೈತ್ರಿ ಮಾಡಿಕೊಳ್ಳೋಣ ಎಂದು ಕುಮಾರಸ್ವಾಮಿ ಅವರು ತಮ್ಮ ಪಕ್ಷದ ಶಾಸಕರನ್ನು ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.
ಬಿಜೆಪಿಯಲ್ಲೂ ಆಂತರಿಕವಾಗಿ ವಿವಾದ
ಜೆಡಿಎಸ್ ಜತೆ ಮೈತ್ರಿಗೆ ಬಿಜೆಪಿಯಲ್ಲೂ ವಿರೋಧ ವ್ಯಕ್ತವಾಗಿದ್ದು, ಮೈತ್ರಿಯಿಂದ ಲೋಕಸಭಾ ಚುನಾವಣೆಗೆ ನೆರವಾಗಬಹುದು, ಆದರೆ, ಮುಂದೆ ಈ ಮೈತ್ರಿ ಪಕ್ಷಕ್ಕೆ ಬಾಧಕವಾಗಬಹುದು ಎಂಬ ಮಾತುಗಳನ್ನು ಕೆಲ ನಾಯಕರು ಹೇಳುತ್ತಿದ್ದು, ಜೆಡಿಎಸ್ ಜತೆ ಮೈತ್ರಿಯಾದರೆ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಯ ಪ್ರಭಾವ ಕುಗ್ಗುತ್ತದೆ. ಜತೆಗೆ ಪಕ್ಷ ಸಂಘಟನೆಯೂ ಕಷ್ಟ ಎಂಬ ಮಾತುಗಳನ್ನು ಈ ನಾಯಕರು ಹೇಳುತ್ತಿದ್ದರಾದರೂ, ಹೈಕಮಾಂಡ್ ಮುಂದೆ ಈ ಮಾತನ್ನು ಹೇಳಲು ಯಾರಿಗೂ ಧೈರ್ಯ ಇಲ್ಲ. ಅಸಹಾಯಕ ಸ್ಥಿತಿಯಲ್ಲಿ ಮೈತ್ರಿಗೆ ವಿರೋಧವಾಗುವ ನಾಯಕರು ಇದ್ದಾರೆ. ಮೈತ್ರಿಗೆ ಬಿಜೆಪಿಯಲ್ಲಿ ವಿರೋಧ ವ್ಯಕ್ತವಾಗುತ್ತಿರುವುದರಿಂದಲೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರು, ಮೊದಲು ಮೈತ್ರಿಯನ್ನು ಸ್ವಾಗತಿಸಿ ಈಗ ಮೈತ್ರಿ ವರಿಷ್ಠರಿಗೆ ಬಿಟ್ಟದ್ದು ಎಂದು ಯು ಟರ್ನ್ ಹೊಡೆದಿದ್ದಾರೆ.
ಪಕ್ಷದಲ್ಲಿ ಎಷ್ಟೇ ವಿರೋಧವಿದ್ದರೂ ಬಿಜೆಪಿ ವರಿಷ್ಠರು ಮಾತ್ರ ನಾಯಕರುಗಳ ಭಿನ್ನ ರಾಗಗಳಿಗೆ ಸೊಪ್ಪು ಹಾಕುತ್ತಿಲ್ಲ. ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ಲೆಕ್ಕಾಚಾರದಲ್ಲಿ ಬಿಜೆಪಿ ವರಿಷ್ಠರು ಇದ್ದಾರೆ. ಅವರಿಗೆ ರಾಜ್ಯರಾಜಕಾರಣಕ್ಕಿಂತ ಲೋಕಸಭಾ ಚುನಾವಣೆಯೇ ಮುಖ್ಯವಾಗಿದೆ. ಹಾಗಾಗಿಯೇ ಮೈತ್ರಿ ಮಾತುಕತೆಗಳನ್ನು ಬಿಜೆಪಿ ವರಿಷ್ಠರು ನಡೆಸಿದ್ದು, ಯಾರು ಏನೇ ವಿರೋಧ ಮಾಡಿದರೂ ಎರಡೂ ಪಕ್ಷಗಳ ಮೈತ್ರಿಯಂತೂ ನಿಶ್ಚಿತ.