ಮೈತ್ರಿಗಾಗಿ ರಾಜ್ಯದ ಹಿತ ಬಲಿ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಆ.೨೨:ರಾಜ್ಯದ ಕಾಂಗ್ರೆಸ್ ಸರ್ಕಾರ ವಿಪಕ್ಷಗಳ ಮೈತ್ರಿಕೂಟ ಇಂಡಿಯಾಗಾಗಿ ರಾಜ್ಯದ ಹಿತವನ್ನು ಬಲಿಕೊಟ್ಟು ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿದೆ. ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಸ್ನೇಹಕ್ಕಾಗಿ ರಾಜ್ಯದ ರೈತರ ಹಿತವನ್ನು ಬಲಿಕೊಡಲಾಗಿದೆ ಎಂದು ಮಾಜಿ ಸಚಿವ ಸಿ.ಟಿ ರವಿ ಹೇಳಿದರು.
ಮಂಡ್ಯದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ತನ್ನ ಲಾಭಕ್ಕಾಗಿ ರಾಜ್ಯದ ಜನತೆಗೆ ದ್ರೋಹಮಾಡಿದೆ ಎಂದು ಟೀಕಿಸಿದರು.
ಕಾವೇರಿ ವಿವಾದಕ್ಕೆ ಶತಮಾನದ ಇತಿಹಾಸವಿದೆ. ವಿಧಾನಸಭಾ ಚುನಾವಣೆಗೂ ಮುನ್ನಕಾಂಗ್ರೆಸ್ ನಾಯಕರು ನಮ್ಮ ನೀರು ನಮ್ಮ ಹಕ್ಕು ಎಂದು ಪಾದಯಾತ್ರೆ ಮಾಡಿದ್ದರು.
ಸಂಕಷ್ಟ ಸೂತ್ರವನ್ನು ಬದಿಗೊತ್ತಿ ತಮಿಳುನಾಡಿಗೆ ನೀರು ಹರಿಸಲಾಗಿದೆ. ರೈತರು ಎಂದರೆ ಎಲ್ಲರೂ ಒಂದೇ, ಆದರೆ ಸಂಕಷ್ಟ ಇದ್ದಾಗ ಅದರ ಸೂತ್ರಕ್ಕನುಗುಣವಾಗಿನೀರು ಹರಿಸಬೇಕಿತ್ತು. ಅದು ಬಿಟ್ಟು ಮೈತ್ರಿಗೋಸ್ಕರ ನೀರನ್ನು ಹರಿಸಿರುವುದು ಸರಿಯಲ್ಲ ಎಂದರು.
ತಮಿಳುನಾಡಿಗೆ ನೀರು ಬಿಟ್ಟು ಸರ್ವಪಕ್ಷ ಸಭೆ ಮಾಡಿದರೆ ಏನು ಪ್ರಯೋಜನ, ನೀರು ಬಿಡುವ ಮೊದಲೇ ಸರ್ವಪಕ್ಷ ಸಭೆ ನಡೆಸಬೇಕಿತ್ತು. ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ಅನ್ಯಾಯ ಮಾಡಿದೆ ಎಂದು ಸಿ.ಟಿ ರವಿಹೇಳಿದರು.ಕಾಂಗ್ರೆಸ್ ಸರ್ಕಾರ ಬಂದಮೇಲೆ ರಾಜ್ಯ ಕತ್ತಲೆಯಲ್ಲಿ ಮುಳುಗಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ವಿದ್ಯುತ್ ಕೊರತೆಯಾಗುವ ಸಾಧ್ಯತೆ ಇದೆ ಎಂದು ಸಿ.ಟಿ. ರವಿ ಹೇಳಿದರು.