ಮೈಕ್ರೋ ಸಾಫ್ಟ್‌ನಲ್ಲೂ ೧೧ ಸಾವಿರ ಹುದ್ದೆ ಕಡಿತ

ಸ್ಯಾನ್ ಫ್ರಾನ್ಸಿಸ್ಕೋ,ಜ.೧೮- ಸಾಪ್ಟ್‌ವೇರ್ ತಂತ್ರಜ್ಞಾನ ದೈತ್ಯ ಸಂಸ್ಥೆ ಮೈಕ್ರೋ ಸಾಫ್ಟ್ ಬರೋಬ್ಬರಿ ೧೧ ಸಾವಿರ ಹುದ್ದೆಗಳನ್ನು ಇಂದಿನಿಂದ ಜಾಗತಿಕವಾಗಿ ಕಡಿತ ಮಾಡಲು ಮುಂದಾಗಿದೆ.
ತಂತ್ರಜ್ಞಾನ ದೈತ್ಯ ಮೈಕ್ರೋಸಾಫ್ಟ್ ಕಾರ್ಪೊರೇಷನ್ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಲು ಸಿದ್ಧವಾಗಿದೆ. ಟ್ವಿಟರ್, ಅಮೆಜಾನ್ ಮತ್ತು ಫೇಸ್‌ಬುಕ್ ಪೋಷಕ ಮೆಟಾ ತಮ್ಮ ಉದ್ಯೋಗಿಗಳನ್ನು ಗಣನೀಯವಾಗಿ ಕಡಿತ ಮಾಡಿದ ನಂತರ ತಂತ್ರಜ್ಞಾನ ಜಗತ್ತಿನಾದ್ಯಂತ ಶೇ.೫ ರಷ್ಟು ಸಿಬ್ಬಂಧಿ ಅಂದರೆ ೧೧,೦೦೦ ಸಿಬ್ಬಂದಿ ವಜಾ ಮಾಡಲು ಮುಂದಾಗಿದೆ.
ಕಂಪ್ಯೂಟರ್ ಉದ್ಯಮದ ದಿಗ್ಗಜ ಸಂಸ್ಥೆ ತನ್ನ ಎಂಜಿನಿಯರಿಂಗ್ ವಿಭಾಗಗಳಲ್ಲಿ ಸಿಬ್ಬಂದಿಯನ್ನು ವಜಾಗೊಳಿಸುವಿಕೆ ಪ್ರಕ್ರಿಯೆ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ.ಈ ಕುರಿತು ಪ್ರತಿಕ್ರಿಯೆ ನೀಡಿರುವ ಮೈಕ್ರೋಸಾಫ್ಟ್ ವಕ್ತಾರರು ಇದು “ವದಂತಿ”. ಈ ಕುರಿತು ಪ್ರತಿಕ್ರಿಯೆ ನೀಡುವುದಿಲ್ಲ ಎಂದಷ್ಟೇ ಹೇಳಿದ್ದಾರೆ.
ಮೈಕ್ರೋ ಸಾಫ್ಟ್ ಕಂಪನಿ ಜಗತ್ತಿನಾದ್ಯಂತ ೨,೨೦,೦೦೦ ಕ್ಕೂ ಹೆಚ್ಚು ಸಿಬ್ಬಂದಿ ಹೊಂದಿದೆ ಕಳೆದ ವರ್ಷ ಎರಡು ಬಾರಿ ತನ್ನ ಉದ್ಯೋಗಿಗಳನ್ನು ಕಡಿತ ಮಾಡಿತ್ತು. ಇದೀಗ ಮೂರನೇ ಬಾರಿಗೆ ಕೈ ಹಾಕಿದೆ ಎಂದು ಮೂಲಗಳು ತಿಳಿಸಿವೆ.
“ಅನಿಶ್ಚಿತ ಆರ್ಥಿಕತೆ” ಮತ್ತು ಸಾಂಕ್ರಾಮಿಕ ಸಮಯದಲ್ಲಿ ಆನ್‌ಲೈನ್ ಚಿಲ್ಲರೆ ವ್ಯಾಪಾರಕ್ಕಾಗಿ ಸಿಬ್ಬಂದಿಯನ್ನು ಅಮೆಜಾನ್ ಸಂಸ್ಥೆ ಹೆಚ್ಚು ಹೆಚ್ಚು ನೇಮಿಸಿಕೊಂಡಿತ್ತು. ತದನಂತರ ೧೮,೦೦೦ ಕ್ಕೂ ಹೆಚ್ಚು ಉದ್ಯೋಗಗಳನ್ನು ಕಡಿತ ಮಾಡಿತ್ತು.
ಮೆಟಾ ನವೆಂಬರ್‌ನಲ್ಲಿ ೧೧,೦೦೦ ಉದ್ಯೋಗಿಳನ್ನು ಕಡಿತ ಮಾಡಿತ್ತು ಐಟಿ ಗ್ರೂಪ್ ಸೇಲ್ಸ್‌ಫೊರ್ಸ್ ೮,೦೦೦ ಕ್ಕಿಂತ ಕಡಿಮೆ ಜನರನ್ನು ವಜಾಗೊಳಿಸಿತ್ತು, ಟ್ವಿಟರ್ ಸಂಸ್ಥೆ ೭,೫೦೦ ಉದ್ಯೋಗಿಗಳಲ್ಲಿ ಅರ್ಧದಷ್ಟು ಜನರನ್ನು ತಕ್ಷಣವೇ ವಜಾ ಮಾಡಲಾಗಿತ್ತು. ಇದೀಗ ಮೈಕ್ರೋ ಸಾಫ್ಟ್ ಸುಮಾರು ೧೧,೦೦೦ ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗಿದೆ.
ಕಂಪ್ಯೂಟರ್ ಉದ್ಯಮ ಕಳೆದ ಎರಡು ವರ್ಷಗಳ ಪ್ರಕ್ಷುಬ್ಧತೆಯನ್ನು ಎದುರಿಸಲಿದೆ ಎಂದು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಹೇಳಿದ ಕೆಲವೇ ದಿನಗಳ ಅಂತದಲ್ಲಿ ೧೧ ಸಾವಿರ ಸಿಬ್ಬಂದಿಯನ್ನು ವಜಾ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.