ಮೈಕ್ರೋ ವೈಯಕ್ತಿಕ ಸಾಲ ಯೋಜನೆಗೆ ಚಾಲನೆ

ಬೆಂಗಳೂರು, ನ.೧೧-ಕೋವಿಡ್ ಕಾರಣದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ಮೈಕ್ರೋ ವೈಯುಕ್ತಿಕ ಸಾಲ ಯೋಜನೆ ಸೇರಿ ಇನ್ನಿತರೆ ಯೋಜನೆಗಳಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸುವ ವೆಬ್ ಸೈಟ್ ಪ್ರಕ್ರಿಯೆಗೆ ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಚಾಲನೆ ನೀಡಲಾಯಿತು.

ನಗರದಲ್ಲಿಂದು ವಿವಿ ಟವರ್ ನಲ್ಲಿರುವ ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಕೇಂದ್ರ ಕಚೇರಿಯಲ್ಲಿ ನಿಗಮದ ಅಧ್ಯಕ್ಷ ಮುಖ್ತಾರ್ ಪಠಾಣ್ ಅವರು ಈ ಪ್ರಕ್ರಿಯೆಗೆ ಚಾಲನೆ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್-೧೯ ಪಿಡುಗಿನಿಂದಾಗಿ ತೊಂದರೆಗೊಳಾಗದ ಕಡುಬಡತನದಲ್ಲಿರುವ ಅಲ್ಪಸಂಖ್ಯಾತ ಸಮುದಾಯದ ೨೩ ಸಾವಿರ ಬಿಪಿಎಲ್ ಕಾರ್ಡ್ ಹೊಂದಿರುವ ೨೫ರಿಂದ ೫೦ ವಯೋಮಾನದೊಳಗಿನ ಮಹಿಳೆಯರು ಈ ಅರ್ಜಿ ಸಲ್ಲಿಸಬಹುದು.

ತಳ್ಳುವ ಗಾಡಿ, ವ್ಯಾಪಾರ, ಬೀದಿ ವ್ಯಾಪಾರ ಹೀಗೆ ಸಣ್ಣ ಪುಟ್ಟ ಕೆಲಸಗಳಲ್ಲಿ ತೊಡಗಿರುವ ವ್ಯಾಪಾರಕ್ಕಾಗಿ ೧೦ ಸಾವಿರ ಅಲ್ಪಾವಧಿ ಸಾಲ ನೀಡಲಾಗುತ್ತದೆ. ಇದಕ್ಕಾಗಿ ಇಂದಿನಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ಡಿ.೧೦ರೊಳಗೆ ಅರ್ಜಿ ಸಲ್ಲಿಸಲು ಕೊನೆದಿನವಾಗಿದೆ ಎಂದು ವಿವರಿಸಿದರು.

ಪ್ರಸ್ತುತ ಸಾಲಿನ ಆಯವ್ಯಯದಲ್ಲಿ ಕೆಎಂಡಿಸಿಗೆ ೧೦೫ಕೋಟಿ ರೂ. ಮೀಸಲಿಡಲಾಗಿದೆ ಎಂದ ಅವರು, ನಿಗಮ ವ್ಯಾಪ್ತಿಯಲ್ಲಿ ಪ್ರಸ್ತುತ ಸಾಲಿನಲ್ಲಿ ವೃತ್ತಿ ಪ್ರೋತ್ಸಾಹ ಯೋಜನೆ, ಅರಿವು, ಶ್ರಮಶಕ್ತಿ, ಪಶು ಸಂಗೋಪನೆ, ಟ್ಯಾಕ್ಸಿ-ಗೂಡ್ಸ್ ಖರೀದಿ ಸೇರಿದಂತೆ ಇನ್ನಿತರ ಯೋಜನೆಗಳಿಗೂ ಚಾಲನೆ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ಆಯೋಗ ಅಧ್ಯಕ್ಷ ಅಬ್ದುಲ್ ಅಜೀಂ, ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಆಯಿಶಾ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.