ಮೈಕ್ರೋ ಪ್ಲಾಸ್ಟಿಕ್‌ನಿಂದ ದೂರವಿರಲು‌ ಸಲಹೆ

ದಾವಣಗೆರೆ.ಜೂ.9;  ನಮಗೇ ಗೊತ್ತಿಲ್ಲದ ರೀತಿಯಲ್ಲಿ ನಾವೆಲ್ಲರೂ ಮೈಕ್ರೋ ಪ್ಲಾಸ್ಟಿಕ್ ಅನ್ನು ವಾತಾವರಣದೊಳಗೆ ಅಪಾರ ಪ್ರಮಾಣದಲ್ಲಿ ಸೇರಿಸುತ್ತಿದ್ದೇವೆ. ಇದರಿಂದ ಮನುಷ್ಯ ಹಾಗೂ ಪರಾಣಿಗಳ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಪರಿಸರ ಪ್ರೇಮಿ ಡಾ. ಶಾಂತಾ ಭಟ್ ಹೇಳಿದರು.ನಗರದ ಕುಂದುವಾಡ ಕೆರೆಯಲ್ಲಿ  ಕುಂದುವಾಡ ಕೆರೆ ವಾಯು ವಿಹಾರಿಗಳ ಬಳಗ ಮತ್ತು ಸಪ್ತಗಿರಿ ಪದವಿಪೂರ್ವ ಕಾಲೇಜು ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವನ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, 0.5 ಎಂಎA ಗಿಂತಲೂ ಕಡಿಮೆ ಉದ್ದ, ದಪ್ಪ, ಅಗಲವಿರುವ ಕಣ್ಣಿಗೆ ಕಾಣದಂತಹ ಪ್ಲಾಸ್ಟಿಕ್‌ನ ಕಣಗಳು ಯಾವುದೇ ರೂಪದಲ್ಲಾದರೂ ದೇಹ ಸೇರುವ ಅಪಾಯವಿದೆ ಎಂದರು.ಚಿಕ್ಕದಾಗ ಈ ಮೈಕ್ರೋ ಪ್ಲಾಸ್ಟಿಕ್‌ಕಣಗಳು ಮನುಷ್ಯ ಮಾತ್ರವಲ್ಲದೆ ಯಾವುದೇ ಪ್ರಾಣಿ, ಸಸ್ಯದ ದೇಹ ಸೇರುವ ಸಾಮರ್ಥ್ಯ ಹೊಂದಿರುತ್ತವೆ. ಅದು ಸಸ್ಯಗಳಲ್ಲಿ ಸುಲಭವಾಗಿ ಬೆರೆತು, ನಾವು ಸೇವಿಸುವ ಹಣ್ಣು, ತರಕಾರಿಗಳಲ್ಲಿ ಸೇರುತ್ತದೆ. ನೀರಿನ ಮಊಲಕ ಜಲಚರಗಳ ದೇಹ ಸೇರುತ್ತದೆ. ಬಳಿಕ ಹಣ್ಣು ತರಕಾರಿ, ಮೀನುಗಳನ್ನು ಆಹಾರ ರೂಪದಲ್ಲಿ ಸೇವಿಸುವ ವ್ಯಕ್ತಿಯ ದೇಹವನ್ನು ಮೈಕ್ರೋ ಪ್ಲಾಸ್ಟಿಕ್ ಸೇರುತ್ತದೆ. ಮನುಷ್ಯನ ದೇಹದ ಟಿಷ್ಯುಗಳನ್ನು ಪರೀಕ್ಷೆ ಮಾಡಿದರೆ ಒಂದು ಜೀವ ಕಣದಲ್ಲಿ 16,000 ಪಾರ್ಟಿಕಲ್ ಮೈಕ್ರೋ ಪ್ಲಾಸ್ಟಿಕ್‌ಗಳು ಸಿಗುತ್ತವೆ. ಇವು ಜೀವಕೋಶಗಳನ್ನು ಸೇರಿ ನಮ್ಮ ಚಯಾಪಚಯ (ಮೆಟಬಾಲಿಸಂ), ಅನುವಂಶೀಯ ಕ್ರಮಾವಳಿಯನ್ನೇ ಬದಲಿಸುವ ಹಾಗೂ ಹಾರ್ಮೋನ್ ವ್ಯವಸ್ಥೆಯನ್ನು ಪಲ್ಲಟಗೊಳಿಸುವ ಸಾಮರ್ಥ್ಯ ಈ ಮೈಕ್ರೋ ಪ್ಲಾಸ್ಟಿಕ್ ಕಣಗಳಿಗಿದೆ ಎಂದು ಎಚ್ಚರಿಸಿದರು.