ಮೈಕಲ್ ಜೋರ್ಡಾನ್ ‘ಶೂ‘ ಮಾರಾಟ ದಾಖಲೆ

ಜೋರ್ಡಾನ್,ಏ.೧೨-ಬಾಸ್ಕೆಟ್‌ಬಾಲ್ ದಿಗ್ಗಜ ಮೈಕಲ್ ಜೆಫ್ರಿ ಜೋರ್ಡಾನ್ ಅವರು ೧೯೯೮ರ ಎನ್‌ಬಿಎ ಅಂತಿಮ ಪಂದ್ಯದಲ್ಲಿ ಧರಿಸಿದ್ದ ‘ಏರ್ ಜೋರ್ಡಾನ್ ೧೩‘ ಶೂ ದಾಖಲೆ $೨.೨ ಮಿಲಿಯನ್‌ಗೆ(೧೮೦,೫೪೫,೯೫೦) ಮಾರಾಟವಾಗಿದೆ.ಈ ಮೂಲಕ ಜಗತ್ತಿನಲ್ಲಿಯೇ ಗರಿಷ್ಠ ಮೊತ್ತಕ್ಕೆ ಮಾರಾಟವಾದ ಶೂ ಎಂದೆನಿಸಿದೆ. ಇದೇ ಆಟದಲ್ಲಿ ಧರಿಸಿದ್ದ ಜೆರ್ಸಿ $೧೦.೧ ಮಿಲಿಯನ್‌ಗೆ ಮಾರಾಟವಾಗಿತ್ತು.
೧೯೯೮ರಲ್ಲಿ ನಡೆದ ‘ಎನ್‌ಬಿಎ ಫೈನಲ್ ಗೇಮ್ ೨‘ ಸರಣಿಯಲ್ಲಿ ಚಿಕಾಗೋ ಬುಲ್ಸ್ ಮತ್ತು ಉತಾಹ್ ಜಾಝ್ ನಡುವೆ ಪಂದ್ಯ ಏರ್ಪಟ್ಟಿತ್ತು. ಈ ಪಂದ್ಯವು ಜೋರ್ಡಾನ್ ಅವರ ಕೊನೆಯ ಪಂದ್ಯವಾಗಿತ್ತು. ಈ ಪಂದ್ಯದ ವೇಳೆ ಜೋರ್ಡಾನ್ ‘ಏರ್ ಜೋರ್ಡಾನ್ ೧೩‘ ಸ್ನೀಕರ್ಸ್ ಧರಿಸಿದ್ದರು. ಉತಾಹ್ ಜಾಝ್ ವಿರುದ್ಧ ಬುಲ್ಸ್ ೯೩-೮೮ ಅಂತರದಲ್ಲಿ ಗೆಲುವು ಪಡೆದು ಚಾಂಪಿಯನ್ ಆಗಿತ್ತು. ಈ ಪಂದ್ಯವನ್ನು ‘ಲಾಸ್ಟ್ ಡ್ಯಾನ್ಸ್‘ ಎಂದು ಕರೆಯಲಾಗಿದೆ.
ಜೋರ್ಡಾನ್ ವೃತ್ತಿಪರ ಬಾಸ್ಕೆಟ್‌ಬಾಲ್ ಆಟಗಾರರಾಗಿದ್ದು, ಚಿಕಾಗೋ ಬುಲ್ಸ್ ತಂಡದಲ್ಲಿ ಪ್ರತಿನಿಧಿಸಿ ಸುಮಾರು ೧೫ ಎನ್‌ಬಿಎ ಸರಣಿಯಲ್ಲಿ ಆಡಿದ್ದಾರೆ. ಆರು ಬಾರಿ ಎನ್‌ಬಿಎ ಚಾಂಪಿಯನ್‌ಶಿಪ್ ಗೆದ್ದಿದ್ದಾರೆ. ೧೯೮೦ ಮತ್ತು ೧೯೯೦ ರ ದಶಕದಲ್ಲಿ ವಿಶ್ವದಾದ್ಯಂತ ಬಾಸ್ಕೆಟ್‌ಬಾಲ್ ಜನಪ್ರಿಯತೆ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.