ಮೇ 6ರ ವರೆಗೆ ಮುತ್ತಗಿ ಕ್ಷೇತ್ರದಲ್ಲಿ ಶ್ರೀ ಲಕ್ಷ್ಮೀನರಸಿಂಹ ದೇವರ ಉತ್ಸವ

ವಿಜಯಪುರ,ಎ.21: ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಟUಕಿನ ಮುತ್ತಗಿ ಕ್ಷೇತ್ರದಲ್ಲಿ ಶ್ರೀ ಲಕ್ಷ್ಮೀನರಸಿಂಹ ದೇವರ ಉತ್ಸವವವು ಎಪ್ರೀಲ್ 21 ರಿಂದ ಮೇ 6ರ ವರೆಗೆ ಜರುಗುತ್ತದೆ ಎಂದು ಮುತ್ತಗಿ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಹಾಗೂ ಅರ್ಚಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವೂ ಅಂದರೆ ಶೋಭನ ನಾಮ ಸಂವತ್ಸರದ ಶ್ರೀ ಶಾಲಿವಾಹನ ಶಕೆ 1945 ವೈಶಾಖ ಶುದ್ಧ ಪ್ರತಿಪದ ದಿನಾಂಕ 21-04-2023 ರಿಂದ ವೈಶಾಖ ವದ್ಯ ಪ್ರತಿಪದ ದಿನಾಂಕ 06-05-2023ರವರೆಗೆ ಶ್ರೀ ಮದುತ್ತರಾದಿ ಮಠಾಧೀಶರಾದ ಶ್ರೀ ಶ್ರೀ 1008 ಶ್ರೀ ಸತ್ಯಪ್ರಮೋದತೀರ್ಥ ಶ್ರೀಪಾದಂಗಳವರ ಕರಕಮಲ ಸಂಜಾತರಾದ ಶ್ರೀ ಶ್ರೀ 1008 ಶ್ರೀಸತ್ಯಾತ್ಮತೀರ್ಥ ಶ್ರೀಪಾದಂಗಳವರ ಹಾಗೂ ಸಮಸ್ತ ಗುರುಗಳ, ದಾಸವರೇಣ್ಯರ ಪರಮಾನುಗ್ರಹದಿಂದ ಶ್ರೀ ಲಕ್ಷ್ಮೀನರಸಿಂಹ ದೇವರ ಉತ್ಸವ ಜರುಗುತ್ತದೆ.

ದಿನಾಂಕ 21-04-2023 ರಂದು ಬೆಳಗ್ಗೆ 9.00 ಗಂಟೆಗೆ ಅರ್ಚಕರ ಮನೆಯಿಂದ ಪಲ್ಲಕ್ಕಿಯೊಂದಿಗೆ ಶ್ರೀ ಲಕ್ಷ್ಮೀ ನರಸಿಂಹ ದೇವರ ಉತ್ಸವಮೂರ್ತಿಯನ್ನು ವೇದಮಂತ್ರ ಘೋಷಗಳೊಡನೆ ಸಕಲ ವಾದ್ಯ ವೈಭವದೊಂದಿಗೆ ದೇವಸ್ಥಾನಕ್ಕೆ ತೆರಳಿ ಗಣಪತಿ ಪೂಜೆ, ಕಳಸಾರೋಹಣದೊಂದಿಗೆ ವಿಜೃಂಭಣೆಯಿಂದ ಉತ್ಸವ ಪ್ರಾರಂಭಗೊಳ್ಳುತ್ತದೆ.

ಉತ್ಸವದಲ್ಲಿ ಜರುಗುವ ವಿಶೇಷ ಕಾರ್ಯಕ್ರಮಗಳು ಪ್ರತಿ ದಿವಸ ಬೆಳಗ್ಗೆ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಮಹಾಪೂಜೆ, ಷೋಡಷೋಪಚಾರ ಮಹಾಪೂಜೆ, ನೈವೇದ್ಯ, ಹಸ್ತೋದಕ, ತೀರ್ಥ ಪ್ರಸಾದ, ಸಾಯಂಕಾಲ ಮಂತ್ರಪುಷ್ಪ ಅಷ್ಠಾವಧಾನ ಸೇವೆ, ಪಲ್ಲಕ್ಕಿ ಸೇವೆ, ತೊಟ್ಟಿಲು ಸೇವೆ, ಭಜನೆ ನಡೆಯುತ್ತದೆ.

ಪ್ರತಿಪದೆಯಿಂದ ದಶಮಿಯವರೆಗೆ ಶ್ರೀ ವೆಂಕಟೇಶ ಮಹಾತ್ಮ ಪುರಾಣ, ದಶಮಿಯ ದಿನ ಕಲ್ಯಾಣೋತ್ಸವ ಜರುಗುತ್ತದೆ. ವೈಶಾಖ ಶುದ್ಧ ದಶಮಿಯಿಂದ ಪೂರ್ಣಿಮೆಯವರೆಗೆ ಸಪ್ತಮಸ್ಕಂದ ಭಾಗವತ ಮಹಾಪುರಾಣ ಜರುಗುತ್ತದೆ. ನರಸಿಂಹ ಜಯಂತಿಯಂದು ದಿನಾಂಕ 04-05-2023ರಂದು ಶ್ರೀಹರಿಗೆ ಕನಕಾಭಿಷೇಕ, ಸಹಸ್ರ ಶಂಖ ಕ್ಷೀರಾಭಿಷೇಕ, ತುಲಾಭಾರ, ಹೋಮ, ಹವನಾದಿಗಳು

ಜರುಗುತ್ತವೆ. ವೈಶಾಖ ಶುದ್ಧ ಪೂರ್ಣಿಮಾ ದಿನಾಂಕ 05-05-2023ರಂದು ರಥಾಂಗ ಹೋಮ ಪ್ರಧಾನ ರಥೋತ್ಸವ ಜರುಗುವುದು. ವೈಶಾಖ ಕೃಷ್ಣ ಪ್ರತಿಪದೆಯಂದು ದಿನಾಂಕ 06-05-2023ರಂದು ಬೆಳಗ್ಗೆ ಹೋಮಹವನ, ಲಲಿತಾ, ಉತ್ಸವ ನಡೆಸಿಕೊಂಡು ಬಂದ ಮಹನೀಯರಿಗೆ ಆಭಾರ ಮನ್ನಣೆ, ಶೇಷವಸ್ತ್ರ ಸಮರ್ಪಣೆ, ದಾನಿಗಳಿಗೆ ಆಭಾರ ಮನ್ನಣೆ, ಪಂಡಿತರಿಗೆ ಸನ್ಮಾನ, ಗೋಪಾಲಕಾವಲಿ, ಅವಕೃತ ಸ್ನಾನ, ವೇದ ಘೋಷದೊಂದಿಗೆ ಶ್ರೀ ನರಸಿಂಹದೇವರ ಪುರ ಪ್ರವೇಶದೊಂದಿಗೆ ಉತ್ಸವ ಸಮಾಪ್ತಿ ಗೊಳ್ಳಲಿದೆ

ಮಂಗಲಮಯವಾದ, ಆನಂದದಾಯಕವಾದ ಉತ್ಸವದಲ್ಲಿ ಭಾಗಿಗಳಾಗಿ ಅನಂತ ಕಲ್ಯಾಣ ಗುಣನಿಧಿಯಾದ ಭಗವಂತನ ದರ್ಶನ, ತೀರ್ಥ-ಪ್ರಸಾದ ಸೇವನಾದಿಗಳಿಂದ ತನು, ಮನ, ಧನಗಳಿಂದ ಸೇವೆಗೈದು ಕೃತಾರ್ಥರಾಗಬೇಕೆಂದು ಅಧ್ಯಕ್ಷ ಹಾಗೂ ಅರ್ಚಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

21ರಂದು ವ್ಹಿ.ಪಿ ಕಟ್ಟಿ, ಆರ್.ಪಿ.ಕಟ್ಟಿ, 22 ರಂದು ಪಿ.ಎಚ್.ಢಾಣಕಶಿರೂರ, ರಂಗನಾಥ ಹರಪನಹಳ್ಳಿ, 23 ರಂದು ಪಿ.ಎನ್.ಕುಲಕರ್ಣಿ, 24 ರಂದು ವ್ಹಿ.ಎಸ್.ಕುಲಕರ್ಣಿ, ಮಧ್ವೇಶ ಕುಲಕರ್ಣಿ, 25 ರಂದು ಬಿ.ಎಚ್.ಸಾವಳಗಿ ಮತ್ತು ಕುಲಕರ್ಣಿ ಬಂದುಗಳು, 26 ರಂದು ಡಿ.ಎಸ್. ದೇಶಪಾಂಡೆ, 27 ರಂದು ಪಿ.ಜೆ.ದೇಶಪಾಂಡೆ ಹಾಗೂ ಎ.ಜೆ.ದೇಶಪಾಂಡೆ, 28 ರಂದು ಕೆ.ಆರ್.ಕುಲಕರ್ಣಿ, ಸಮೀರ ಚಿಕ್ಕೋಡಿ, 29 ರಂದು ಆರ್.ಎ.ಚೌದರಿ, 30 ರಂದು ಕಿರಣ ಚೌಧರಿ, 1ರಂದು ಜಾಗರೋತ್ಸವ, 2 ರಂದು ದೇವಸ್ಥನದ ಅರ್ಚಕರು ಹಾಗೂ ಸಹೋದರರು, 3 ರಂದು ಸಂಜೀವ ಎಂ.ಕುಲಕರ್ಣಿ, 4 ರಂದು ನರಗುಂದ ಸಹೋದರರು, 5 ರಂದು ಗುರುರಾಜ ಕುಲಕರ್ಣಿ ಹಾಗೂ ಡಾ. ಎ.ಆರ್.ಗಂಡಮಾಲಿ 6 ರಂದು ಎ.ಎಸ್.ಗುಡಿ, ಎಸ್.ಬಿ.ಮುತ್ತಗಿ ಹಾಗೂ ಸಾರ್ವಜನಿಕ ವಂತಿಗೆಯಿಂದ ಉತ್ಸವ ನಡೆಸಲಾಗುವದು ಎಂದು ಮುತ್ತಗಿ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಹಾಗೂ ಅರ್ಚಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.