ಮೇ .30ರ ಹಾಸನ್ ಚಲೋ ಚಳುವಳಿಗೆ ಕಮ್ಯುನಿಸ್ಟ್ ಪಕ್ಷದ ಬೆಂಬಲ

ಕಲಬುರಗಿ:ಮೇ.23: ಪೆನ್‍ಡ್ರೈವ್ ಪ್ರಕರಣದ ಪ್ರಮುಖ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬಂಧನಕ್ಕೆ ಆಗ್ರಹಿಸಿ ಮೇ 30ರಂದು ಹಮ್ಮಿಕೊಂಡಿರುವ ಹಾಸನ್ ಚಲೋ ಚಳುವಳಿಗೆ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್‍ಸಿಸ್ಟ್) ಪಕ್ಷವು ಬೆಂಬಲಿಸುತ್ತದೆ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಶ್ರೀಮತಿ ಕೆ. ನೀಲಾ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆನ್‍ಡ್ರೈವ್ ಪ್ರಕರಣದಿಂದ ಇಡೀ ದೇಶವೇ ತಲ್ಲಣಿಸುವಂತಾಗಿದೆ. ಅಧಿಕಾರ ಮತ್ತು ಸಂಪತ್ತು ಬಲದಿಂದ ಸಾವಿರಾರು ಮಹಿಳೆಯರನ್ನು ಅಸಹಾಯಕತೆಗೆ ದೂಡಿ ಅವರನ್ನು ಬಳಸಿಕೊಂಡು ಘನತೆಯ ಬದುಕಿಗೆ ಧಕ್ಕೆ ತರುವಂತಹ ಕಾರ್ಯ ಪ್ರಜ್ವಲ್ ರೇವಣ್ಣ ಮತ್ತು ಎಚ್.ಡಿ. ರೇವಣ್ಣ ಅವರಿಂದ ಆಗಿದೆ. ಅವರ ವಿರುದ್ಧ ಪ್ರಕರಣ ದಾಖಲಾದರೂ ಸಹ ಪ್ರಜ್ವಲ್ ರೇವಣ್ಣ ಅವರನ್ನು ಇಲ್ಲಿಯವರೆಗೆ ಬಂಧಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿ ಮೂರು ಸಾವಿರದಷ್ಟು ಮಹಿಳೆಯರ ಘನತೆಯ ಬದುಕನ್ನು ರಕ್ಷಿಸಲು ಬೇಕಾದ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿ ಹಾಸನ್ ಜಿಲ್ಲೆಯಲ್ಲಿ ಬೆಳೆದು ಬಂದ ಪಾಳೆಗಾರಿಕೆ ವಿರುದ್ಧ ಜನರು ಈಗಾಗಲೇ ಧ್ವನಿ ಎತ್ತಿದ್ದು, ಆ ಹಿನ್ನೆಲೆಯಲ್ಲಿ ಹಾಸನ್ ಚಲೋ ಚಳುವಳಿ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಪಾಳೆಗಾರಿಕೆ, ಭೂಮಾಲಿಕ, ಬಂಡವಾಳಶಾಹಿ ವ್ಯವಸ್ಥೆ ತೊಲಗದ ಹೊರತು ಮಹಿಳಾ ಸಮಾನತೆ ಸಮಾಜ ಬರುವುದಿಲ್ಲ. ಮಹಿಳೆಯನ್ನು ಸರಕಾಗಿಸುವ ಮತ್ತು ಅವರನ್ನು ಎಲ್ಲ ರೀತಿಯ ತಮ್ಮ ಲಾಭಕ್ಕಾಗಿ ಬಳಸುವ ಹುನ್ನಾರವು ಬಂಡವಾಳಶಾಹಿ ಭೂಮಾಲಿಕರು ಹೊಂದಿದ್ದಾರೆ. ಇದು ಎಲ್ಲ ರೀತಿಯ ಸಾಮಾಜಿಕ ಅಸಮಾನತೆಗೆ ಮತ್ತು ದೌರ್ಜನ್ಯಕ್ಕೆ ಕಾರಣವಾಗುತ್ತಿದೆ. ಆದ್ದರಿಂದ ಹಾಸನ್ ಚಲೋ ಚಳುವಳಿ ಅತ್ಯಂತ ಮಹತ್ವದ್ದು ಎಂದು ಅವರು ತಿಳಿಸಿದರು.
ಪ್ರಾದೇಶಿಕ ಪಕ್ಷ ನಾಶವಾಗುತ್ತಿರುವ ಕಾರಣಗಳನ್ನು ಅರಿಯಲು ಬೇಕಾದ ವಿವೇಕವನ್ನು ಪಡೆಯುವ ಬದಲಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಆಂದೋಲನವನ್ನು ರಾಜಕೀಯ ಮೇಲಾಟಕ್ಕೆ ಬಳಸಿಕೊಂಡು ಹಾಸನ್ ಚಲೋ ಕಾಂಗ್ರೆಸ್ ಪ್ರಾಯೋಜಿತ ಎಂದು ಹೇಳಿಕೆ ಕೊಟ್ಟಿದ್ದು ದುರಂತದ ಸಂಗತಿ ಎಂದು ಆಕ್ಷೇಪಿಸಿದ ಅವರು, ಕೂಡಲೇ ಕುಮಾರಸ್ವಾಮಿ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದು ಮಹಿಳೆಯರಲ್ಲಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಮಾತೆತ್ತಿದರೆ ಹಿಂದೂತ್ವ ಮತ್ತು ಸಂಸ್ಕøತಿಯ ಕುರಿತು ಮಾತನಾಡುವ ಬಿಜೆಪಿಯವರು, ಪೆನ್‍ಡ್ರೈವ್ ಪ್ರಕರಣದ ಕುರಿತು ಒಂದೇ ಒಂದು ಮಾತನಾಡುತ್ತಿಲ್ಲ. ಪ್ರಜ್ವಲ್ ರೇವಣ್ಣ ಅವರ ಪರ ಸ್ವತ: ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರಚಾರ ಮಾಡಿದ್ದಾರೆ. ದುಷ್ಕøತ್ಯ ಗೊತ್ತಿದ್ದರೂ ಸಹ ಬೆಂಬಲಿಸಿದ್ದಾರೆ. ಇದರಿಂದ ಬಿಜೆಪಿಯು ಯಾವ ಮೌಲ್ಯಗಳ ಪರವಾಗಿದೆ ಎಂಬುದು ಸಾಬೀತಾಗಿದೆ ಎಂದು ಅವರು ಕಿಡಿಕಾರಿದರು.
ಬಿಜೆಪಿಯು ಜೆಡಿಎಸ್‍ನ್ನು ಇನ್ನಷ್ಟು ದೋಷ, ದೌರ್ಬಲ್ಯಗಳ ಮತ್ತು ಜನವಿರೋಧಿ ಕೃತ್ಯಗಳಲ್ಲಿ ತೊಡಗುವಂತೆ ಮಾಡಿದೆ. ತನ್ಮೂಲಕ ಒಂದು ಪ್ರಾದೇಶಿಕ ಪಕ್ಷವನ್ನು ನಾಶಗೊಳಿಸಿ ತನ್ನ ಸರ್ವಾಧಿಕಾರ ಸ್ಥಾಪನೆಗೆ ಶಡ್ಯಂತ್ರ ತೀವ್ರಗೊಳಿಸಿದೆ. ಕರ್ನಾಟಕದಲ್ಲಿನ ಸೌಹಾರ್ದ ಪರಂಪರೆಯನ್ನು ಕಿತ್ತು ಹಾಕಿ ಮನುವಾದಿ ಮೌಲ್ಯಗಳನ್ನು ಹಬ್ಬಿ ಹರಡುವಂತೆ ಮಾಡುವಲ್ಲಿ ಅದು ಮಹಿಳಾ ಪ್ರಕರಣಗಳನ್ನು ಬಳಸಿಕೊಂಡಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಮಹಿಳಾ ಸಮಾನತೆ, ಸಾಮಾಜಿಕ ನ್ಯಾಯದ ಪರಿಪಾಲನೆ, ಸೌಹಾರ್ದ ಪರಂಪರೆ ಕರ್ನಾಟಕದ ಜೀವಸತ್ವಗಳಾಗಿವೆ. ಅದನ್ನು ರಕ್ಷಿಸುವ, ಉಳಿಸಿಕೊಳ್ಳುವ ಜವಾಬ್ದಾರಿಯನ್ನು ಜನತೆಯು ಇಂತಹ ಆಂದೋಲನಗಳ ಮೂಲಕ ಕಾಲಕಾಲಕ್ಕೆ ಪ್ರದರ್ಶಿಸಿದ್ದಾರೆ. ಆದ್ದರಿಂದ ಹಾಸನ್ ಚಲೋ ಚಳುವಳಿಗೆ ಸರ್ವ ಜನತೆಯು ಬೆಂಬಲಿಸಬೇಕು ಎಂದು ಅವರು ಕೋರಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಶ್ರೀಮಂತ್ ಬಿರಾದಾರ್, ಶ್ರೀಮತಿ ಗೌರಮ್ಮ ಪಾಟೀಲ್, ಜಿಲ್ಲಾ ಸಮಿತಿ ಸದಸ್ಯ ಪಾಂಡುರಂಗ್ ಮಾವಿನಕರ್, ಜಿಲ್ಲಾ ಸಮಿತಿ ಸದಸ್ಯ ಡಾ. ಸಾಯಬಣ್ಣ ಗುಡುಬಾ ಮುಂತಾದವರು ಉಪಸ್ಥಿತರಿದ್ದರು.