ಮೇ.29 ಶಾಲೆಗಳ ಆರಂಭೋತ್ಸವದ ಹಬ್ಬ ಆಚರಣೆ

ಕೋಲಾರ,ಮೇ,೨೬- ಜಿಲ್ಲಾದ್ಯಂತ ಮೇ.೨೯ ರಿಂದ ಶಾಲೆಗಳನ್ನು ಹಬ್ಬದಂತೆ ಆರಂಭಿಸಿ, ಇಲಾಖೆ ನೀಡಿರುವ ಶೈಕ್ಷಣಿಕ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ, ೨೦೨೩-೨೪ನೇ ಸಾಲಿನಲ್ಲೂ ಎಸ್ಸೆಸ್ಸೆಲ್ಸಿ ಫಲಿತಾಂಶ ಮತ್ತಷ್ಟು ಗುಣಾತ್ಮಕಗೊಳಿಸಲು ಈಗಿನಿಂದಲೇ ಕ್ರಿಯಾಯೋಜನೆ ರೂಪಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ಕರೆ ನೀಡಿದರು.
ನಗರದ ಸ್ಕೌಟ್ಸ್‌ಭವನದಲ್ಲಿ ಗುರುವಾರ ನಡೆದ ಜಿಲ್ಲೆಯ ಪ್ರೌಢಶಾಲಾ ಮುಖ್ಯಶಿಕ್ಷಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಾಲಾ ಆರಂಭೋತ್ಸವ ಹಬ್ಬಂದಂತಿರಲಿ, ತಳಿರು ತೋರಣಗಳಿಂದ ಸಿಂಗರಿಸಿ ಆಕರ್ಷಣೀಯಗೊಳಿಸಿ, ಮಕ್ಕಳನ್ನು ಆತ್ಮೀಯವಾಗಿ ಸ್ವಾಗತಿಸಿ, ಮೊದಲ ದಿನ ಸಿಹಿ ಊಟ ಉಣಬಡಿಸಿ, ಯಾವುದೇ ಗೊಂದಲ,ಮೂಲಸೌಲಭ್ಯಗಳ ಕೊರತೆ ಎದುರಾಗದಂತೆ ಎಚ್ಚರಿಕೆ ವಹಿಸಿ ಎಂದು ತಾಕೀತು ಮಾಡಿದರು.
ಮೇ. ೨೯ ರಂದೇ ಶಾಲೆಗೆ ಎಲ್ಲಾ ಶಿಕ್ಷಕರು ಕಡ್ಡಾಯವಾಗಿ ಹಾಜರಾಗತಕ್ಕದ್ದು ಎಂದ ಅವರು, ಮೊದಲಿಗೆ ಶಾಲಾ ಕೊಠಡಿಗಳು, ಆವರಣ, ಅಡುಗೆ ಕೋಣೆ, ಅಡುಗೆ ಪಾತ್ರೆಗಳು, ಅಹಾರ ಧಾನ್ಯಗಳು, ನೀರಿನ ಸಂಪ್ ಇತ್ಯಾದಿಗಳನ್ನು ಕಡ್ಡಾಯವಾಗಿ ಸ್ವಚ್ಛ ಗೊಳಿಸಿ ಅಣಿಗೊಳಿಸಿಕೊಳ್ಳಿ ಎಂದು ಸೂಚಿಸಿದರು.
ಶಾಲಾ ಮೊದಲ ದಿನವೇ ಶಾಲಾ ವೇಳಾಪಟ್ಟಿಯನ್ನು ಕಡ್ಡಾಯವಾಗಿ ಸಿದ್ದಗೊಳಿಸಿಕೊಳ್ಳಿ ಎಂದು ಸೂಚಿಸಿದ ಅವರು, ಶಾಲಾ ವೇಳಾಪಟ್ಟಿಯಂತೆ ಶಾಲೆಯಲ್ಲಿ ಕಾರ್ಯನಿರ್ವಹಿಸತಕ್ಕದ್ದು ಎಂದ ಅವರು, ವಿವಿಧ ಕ್ಲಬ್‌ಗಳ ರಚನೆ, ಅವುಗಳ ಕ್ರಿಯಾಯೋಜನೆ ತಯಾರಿಕೆ ಮತ್ತಿತರ ಕಾರ್ಯಗಳತ್ತಲೂ ಗಮನಹರಿಸಿ ಎಂದರು.
ಶಾಲೆಗಳಿಗೆ ಈ ಶೈಕ್ಷಣಿಕ ವರ್ಷದ ಪಠ್ಯಪುಸ್ತಕಗಳನ್ನು ಈಗಾಗಲೇ ಸರಬರಾಜು ಮಾಡಲಾಗಿದೆ, ಶಾಲಾ ಆರಂಭದ ದಿನ ಅಥವಾ ಮೇ.೩೦ರೊಳಗೆ ಎಲ್ಲಾ ಮಕ್ಕಳಿಗೂ ೨೦೨೩-೨೪ನೇ ಸಾಲಿನ ಪಠ್ಯಪುಸ್ತಕ ಒದಗಿಸಲು ಅಗತ್ಯಕ್ರಮಕೈಗೊಳ್ಳಿ, ಸ್ಯಾಟ್ಸ್‌ನಡಿ ಕಡ್ಡಾಯವಾಗಿ ಸ್ವೀಕರಿಸಿರುವ ಪುಸ್ತಕಗಳ ಸ್ವೀಕೃತಿ ಪಡೆಯಿರಿ ಎಂದ ಅವರು, ಸಮವಸ್ತ್ರ ವಿತರಿಸಿ ದಾಖಲೀಕರಣ ಕಡ್ಡಾಯವಾಗಿ ನಿರ್ವಹಿಸಿ ಎಂದರು.
ಮೇ.೨೯ ರಿಂದಲೇ ಮಕ್ಕಳು, ಶಿಕ್ಷಕರ ಹಾಜರಾತಿ ಕಡ್ಡಾಯವಾಗಿದ್ದು, ಹಾಜರಾತಿಯನ್ನು ಸಮರ್ಪಕವಾಗಿ ನಿರ್ವಹಿಸಿ, ಶಾಲೆಗೆ ಬಾರದ ಮಕ್ಕಳ ಮನೆಗೆ ಹೋಗಿ ಪೋಷಕರ ಮನವೊಲಿಸಿ ಆ ಮಕ್ಕಳು ಶಾಲೆಯಿಂದ ವಂಚಿತರಾಗದಂತೆ ಕ್ರಮವಹಿಸಿ ಎಂದು ಸೂಚಿಸಿ,
ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ ಮಂಜುಳಾ, ಜಿಲ್ಲಾ ಶಿಕ್ಷಣಾಧಿಕಾರಿ ಮುನಿವೆಂಕಟರಾಮಾಚಾರಿ ಜಿಲ್ಲಾ ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಶಂಕರೇಗೌಡ,ಹಾಗೂ ಜಿಲ್ಲಾ ಪಠ್ಯಪುಸ್ತಕ ನೋಡಲ್ ಅಧಿಕಾರಿ ಗಾಯತ್ರಿ,, ವಿಷಯ ಪರಿವೀಕ್ಷಕ ಕೃಷ್ಣಪ್ಪ, ಎವೈಪಿಸಿ ಮೋಹನ್ ಬಾಬು ಮಾತನಾಡಿ ಹಲವು ಸಲಹೆ ಸೂಚನೆಗಳ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಬಿಇಒಗಳಾದ ಕನ್ನಯ್ಯ, ಗಂಗರಾಮಯ್ಯ, ಡಿವೈಪಿಸಿ ಚಂದ್ರಕಲಾ, ವಿಷಯ ಪರಿವೀಕ್ಷಕರಾದ ಶಶಿವಧನ ಸೇರಿದಂತೆ ಜಿಲ್ಲೆಯ ಸರ್ಕಾರಿ,ಅನುದಾನಿತ, ಖಾಸಗಿ ಶಾಲೆಗಳ ಮುಖ್ಯಶಿಕ್ಷಕರು ಸಭೆಯಲ್ಲಿ ಹಾಜರಿದ್ದರು.