ಮೇ 29ಕ್ಕೆ ಶಾಲೆಗಳ ಪುನಾರಂಭಮಕ್ಕಳ ಸಮವಸ್ತ್ರ-ಪಠ್ಯಪುಸ್ತಕ ದಾಸ್ತಾನ ಆರಂಭ

ಆಳಂದ:ಮೇ.19: ಅಧಿಕಾರಿಗಳ ಹೇಳಿಕೆಯಂತೆ ಮೇ 29ರಂದು (10 ದಿನಗಳಲ್ಲಿ) ಪ್ರಸಕ್ತ ಶೈಕ್ಷಣಿಕ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ತರಗತಿ ಪುನಾರಂಭ ಹಿನ್ನೆಲೆಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಸರ್ಕಾರ ನೀಡುವ ಉಚಿತ ಸವಸ್ತ್ರ ಮತ್ತು ಪಠ್ಯಪುಸ್ತಕ ವಿತರಣೆ ಕಾರ್ಯಕ್ಕೆ ಶಿಕ್ಷಣ ಇಲಾಖೆ ಭರದ ಸಿದ್ಧತೆ ನಡೆಸಿದೆ.
ಈಗಾಗಲೇ ತಾಲೂಕಿನ ಶಾಲೆಗಳಿಗೆ ದಾಸ್ತಾನು ಕೈಗೊಂಡಿದ್ದ ಮಕ್ಕಳ ಸಮವಸ್ತ್ರಗಳನ್ನು ಆಯಾ ಶಾಲೆಗಳ ಮುಖ್ಯಸ್ಥರಿಗೆ ಹಸ್ತಾಂತರಿಸುವ ಕಾರ್ಯದಲ್ಲಿ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಣಾ ನೋಡಲಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಮುಂದಾಗಿದ್ದಾರೆ.
ಒಟ್ಟು ಶಾಲೆಗಳಲ್ಲಿನ ಮಕ್ಕಳ ಬೇಡಿಕೆ ಪಠ್ಯಪುಸ್ತಕ ಅರ್ಧದಷ್ಟು ದಾಸ್ತಾನು ಕೇಂದ್ರದಲ್ಲಿ ದಾಸ್ತಾನಾಗಿದ್ದು, ಇನ್ನೂ ವಿಷಯವಾರು ಮತ್ತು ತರಗತಿವಾರು ಪುಸ್ತಕಗಳ ದಾಸ್ತಾನು ಕೇಂದ್ರಕ್ಕೆ ಬಂದಮೇಲೆ ಶಾಲೆಗಳಿಗೆ ವಿತರಣೆಗೆ ಚಾಲನೆ ದೊರೆಯಲಿದೆ.
ಒಟ್ಟು ತಾಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ 94, ಹಿರಿಯ ಪ್ರಾಥಮಿ ಶಾಲೆ 166, ಸರ್ಕಾರಿ ಪ್ರೌಢಶಾಲೆಗಳು 48, ಅನುದಾನಿತ ಪ್ರಾಥಮಿಕ ಶಾಲೆ 19, ಅನುದಾನಿತ ಪ್ರೌಢ 11 ಶಾಲೆಗಳು ಹಾಗೂ ಅನುದಾನ ರಹಿತ ಕಿರಿಯ ಪ್ರಾಥಮಿಕ ಶಾಲೆ 34, ಹಿರಿಯ ಪ್ರಾಥಮಿಕ ಶಾಲೆ 56 ಶಾಲೆಗಳಿದ್ದು ಖಾಸಗಿ ಅನುದಾನ ರಹಿತ 130 ಶಾಲೆಗಳಿವೆ. ಅಲ್ಲದೆ ಇದಕ್ಕೆ ಹೊರತಾಗಿಯೂ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ನಡೆಯುವ ಕಿರಿಯ ಪ್ರಾಥಮಿಕ ಶಾಲೆ 1, ಹಿರಿಯ ಪ್ರಾಥಮಿಕ ಶಾಲೆ 1, ಪ್ರೌಢಶಾಲೆಗಳ 6, ಹೀಗೆ ಒಟ್ಟು 8 ಶಾಲೆಗಳು ಒಳಗೊಂಡು ಸರ್ಕಾರಿ ಮತ್ತು ಖಾಸಗಿ ಅನುದಾನಿತ ಅನುದಾನ ರಹಿತ ಮತ್ತು ಸಮಾಜ ಕಲ್ಯಾಣ ಅಡಿಯಲ್ಲಿನ ಒಟ್ಟು ಶಾಲೆಗಳ ಸಂಖ್ಯೆ 470 ಶಾಲೆಗಳಲ್ಲಿ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆಗೆ ಅಂತಿಮ ಸಿದ್ಧತೆ ನಡೆದಿದೆ.
ಪುಸ್ತಕ ದಾಸ್ತಾನು: ತಾಲೂಕಿನ ಶಿಕ್ಷಣ ಇಲಾಖೆಯ ಅಡಿಯಲ್ಲಿನ ಶಾಲೆಗಳ ಮಕ್ಕಳಿಗೆ ಬೇಡಿಕೆಯ ಒಟ್ಟು 762484 ಪುಸ್ತಕಗಳ ಸಂಖ್ಯೆಯಲ್ಲಿ ಈಗಾಗಲೇ 281287 ಪುಸ್ತಕಗಳು ಬೇಡಿಕೆಯ ಶೇ 37ರಷ್ಟು ಪುಸ್ತಗಳು ದಾಸ್ತಾನಾಗಿದ್ದು, ಇನ್ನೂ 63ರಷ್ಟು ವಿವಿಧ ವಿಷಯಗಳ ಪುಸ್ತಕ ಬರಲಿವೆ ಪುಸ್ತಕಗಳು ಬಂದ ತಕ್ಷಣವೇ ಆಯಾ ಶಾಲೆಗಳಿ ಹಂಚಿಕೆಮಾಡಿ ಶಾಲಾ ಆರಂಭದಲ್ಲೇ ಪುಸ್ತಕಗಳನ್ನು ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಾಲೂಕು ನೋಡಲ್ ಅಧಿಕಾರಿ ಶ್ರೀಮಂತ ಪಾಟೀಲ ಅವರು ಮಾಹಿತಿ ನೀಡಿದ್ದಾರೆ.