ಮೇ 28 ಹಾಗೂ 29 ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ

ಕಲಬುರಗಿ,ಮೇ.27:ತುರ್ತು ದುರಸ್ತಿ ಕಾರ್ಯಕೈಗೊಂಡಿರುವ ಹಿನ್ನೆಲೆಯಲ್ಲಿ ಇದೇ ಮೇ 28 ಹಾಗೂ 29 ರಂದು ಕಲಬುರಗಿ ನಗರಕ್ಕೆ ನೀರು ಸರಬರಾಜು ಮಾಡುವ ಎಸ್.ಬಿ. ನೆಲಮಟ್ಟದ ಮತ್ತು ಮೇಲ್ಮಟ್ಟದ ಜಲ ಸಂಗ್ರಹಗಾರದಿಂದ ಸರಬರಾಜಾಗುವ ಈ ಕೆಳಕಂಡ ಬಡಾವಣೆಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಕಲಬುರಗಿ ನಗರದ ಕೆಳಕಂಡ ಬಡಾವಣೆಗಳ ಸಾರ್ವಜನಿಕರು ಜಲಮಂಡಳಿಯೊಂದಿಗೆ ಸಹಕರಿಸಬೇಕೆಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಲಬುರಗಿ ನೀರು ಮತ್ತು ಸರಬರಾಜು ನಿರ್ವಹಣೆ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.

ಕಲಬುರಗಿ ನಗರಕ್ಕೆ ನೀರು ಸರಬರಾಜು ಮಾಡುವ ಲಾಲಗೇರಿ ಕ್ರಾಸ್ ಮುಕ್ತಾಂಬಿಕಾ ಕಾಲೇಜ್ ಎದುರುಗಡೆಯಿರುವ 450 ಎಂ.ಎಂ. ವ್ಯಾಸದ ಪಿ.ಎಸ್.ಸಿ. ಮುಖ್ಯ ಕೊಳವೆ ಮಾರ್ಗದಲ್ಲಿ ಸೋರುವಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಇದರ ತುರ್ತು ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಬೇಕಾಗಿದೆ. ಇದರ ಪ್ರಯುಕ್ತ ಕಲಬುರಗಿ ನಗರದ ಐವಾನ್ ಶಾಹಿ, ಇಂದಿರಾ ನಗರ, ಸಂಗಮೇಶ್ವರ ಕಾಲೋನಿ, ಶಾಂತಿ ನಗರ, ಸ್ವೇಷನ್ ಬಡಾವಣೆ, ವಿದ್ಯಾ ನಗರ, ವೆಂಕಟೇಶ ನಗರ, ಶಾಸ್ತ್ರೀ ನಗರ, ವಿವೇಕಾನಂದ ನಗರ, ಮಹಾವೀರ ನಗರ, ಆನಂದ ನಗರ, ಪಂಚಶೀಲ ನಗರ, ರಾಮನಗರ ಹಾಗೂ ಗೋದುತಾಯಿ ಕಾಲೋನಿಗಳ ಬಡಾವಣೆಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.