ಮೇ.27 ರಿಂದ “ಮೇ ಸಾಹಿತ್ಯ ಮೇಳ”

ವಿಜಯಪುರ:ಮೇ.26: ನಗರದಲ್ಲಿ ಮೇ 27 ಮತ್ತು 28 ರಂದು ಎರಡು ದಿನಗಳ ಕಾಲ ನಡೆಯಲಿರುವ 9 ನೇ ಮೇ ಸಾಹಿತ್ಯ ಮೇಳದಲ್ಲಿ ಡಾ. ಬಿ. ಆರ್ ಅಂಬೇಡ್ಕರ್ ಅವರ ಮೊಮ್ಮಗರಾದ ಬಾಳಾಸಾಹೇಬ ಎಂದೇ ಖ್ಯಾತರಾಗಿರುವ ಪ್ರಕಾಶ್ ಯಶವಂತ್ ಅಂಬೇಡ್ಕರ್ ಅವರು ಭಾಗವಹಿಸಲಿದ್ದು, ಕಾರಣ ಈ ಕಾರ್ಯಕ್ರಮಕ್ಕೆ ಅಂಬೇಡ್ಕರ್ ಅನುಯಾಯಿಗಳು, ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲೆಯ ಅಂಬೇಡ್ಕರ್‍ವಾದಿ, ಯುವ ಸಾಹಿತಿ ಹಾಗೂ ಪತ್ರಕರ್ತರೂ ಆಗಿರುವ ಮಂಜುನಾಥ.ಎಸ್.ಕಟ್ಟಿಮನಿ ಅವರು ಮನವಿ ಮಾಡಿದ್ದಾರೆ.
ಗುಮ್ಮಟ ನಗರಿ ಐತಿಹಾಸಿಕ ವಿಜಯಪುರ ನಗರದಲ್ಲಿ ಇದೇ ಮೇ 27 ಮತ್ತು 28 ರಂದು ಜರುಗಲಿರುವ 9ನೇ “ಮೇ ಸಾಹಿತ್ಯ ಮೇಳ”ದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಮೊಮ್ಮಗ ಬಾಳಾಸಾಹೇಬ ಪ್ರಕಾಶ ಅಂಬೇಡ್ಕರ್ ಅವರು ಭಾಗವಹಿಸಲಿದ್ದಾರೆ. ಈ ಮೂಲಕ ಮೇಳಕ್ಕೆ ಇನ್ನಷ್ಟು ಮೆರಗು ಬರಲಿದ್ದು, ಕಾರ್ಯಕ್ರಮ ಕಳೆಗಟ್ಟಲಿದೆ.
ಮೇ 27ರಂದು ಮುಂಜಾನೆ 10 ಗಂಟೆಗೆ ನಗರದ ಕಂದಗಲ ಹನಮಂತರಾಯ ರಂಗಮಂದಿರದಲ್ಲಿ ನಡೆಯಲಿರುವ ಸಾಹಿತ್ಯ ಮೇಳದ ಉದ್ಘಾಟನಾ ಗೋಷ್ಢಿಯಲ್ಲಿ ಪ್ರಕಾಶ ಅಂಬೇಡ್ಕರ್ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. “ಭಾರತೀಯ ಪ್ರಜಾತಂತ್ರ: ಸವಾಲು, ಮೀರುವ ದಾರಿಗಳು” ಎಂಬ ವಿಷಯ ಮೇನ್ ಥೀಮ್ ಆಗಿ ಇರುವ ಈ ಸಲದ ಮೇ ಸಾಹಿತ್ಯ ಮೇಳದ ಉದ್ಘಾಟನಾ ಗೋಷ್ಠಿಯ ಕೀ ನೋಟ್ ಅಡ್ರೆಸ್ ಮಾಡುವವರಲ್ಲಿ ಅವರೂ ಒಬ್ಬರಾಗಿದ್ದು, ಹರ್ಷ ಮಂದರ್, ತೀಸ್ತಾ ಸೆತಲ್ವಾಡ, ಪ್ರಕಾಶ ಅಂಬೇಡ್ಕರ್ ಜತೆಗೆ ಕನ್ನಡದಿಂದ ಒಬ್ಬರು ಉದ್ಘಾಟನಾ ಗೋಷ್ಠಿಯಲ್ಲಿರಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಪ್ರಕಾಶ ಅಂಬೇಡ್ಕರ್ ಅವರು ಈ ಹಿಂದೆಯೂ ಬೇರೆ ಬೇರೆ ದಲಿತ ಸಂಘಟನೆಗಳು ಏರ್ಪಡಿಸಿದ್ದ ಸಮಾವೇಶಗಳಲ್ಲಿ ಭಾಗವಹಿಸಿದ್ದಾರೆ. ಆದರೆ ಸಾಹಿತ್ಯ ಮೇಳವೊಂದರಲ್ಲಿ ಅವರು ಭಾಗವಹಿಸುತ್ತಿರುವುದು ಇದೇ ಮೊದಲು ಎಂಬುದು ಇನ್ನೊಂದು ಬಹಳ ವಿಶೇಷ ಸಂಗತಿಯಾಗಿದೆ.
ಜ್ಞಾನದ ಮಹಾ ಪರ್ವತವೇ ಆಗಿದ್ದ ಡಾ. ಬಿ. ಆರ್ ಅಂಬೇಡ್ಕರ್ ಅವರ ಮೊಮ್ಮಗರಾದ ಪ್ರಕಾಶ್ ಯಶವಂತ್ ಅಂಬೇಡ್ಕರ್ ಅವರು ಅಂಬೇಡ್ಕರ್ ಅವರ ಹೋರಾಟದ ಪರಂಪರೆಯನ್ನು ಸಮರ್ಥವಾಗಿ ಮುಂದುವರೆಸಿದವರಾಗಿದ್ದು ಅವರೊಬ್ಬ ಬರಹಗಾರ ಹಾಗೂ ಉತ್ತಮ ನ್ಯಾಯವಾದಿಯಾಗಿದ್ದಾರೆ. ಭಾರಿಪಾ ಬಹುಜನ ಮಹಾಸಂಘ ಎಂಬ ರಾಜಕೀಯ ಪಕ್ಷದ ಅಧ್ಯಕ್ಷರಾಗಿದ್ದು, ಎರಡು ಬಾರಿ ಮಹಾರಾಷ್ಟ್ರದ ಅಕೋಲಾ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ರಿಪಬ್ಲಿಕ್ ಆಫ್ ಇಂಡಿಯಾ, ಬಾರಿಪಾ ಬಹುಜನ್ ಮಹಾಸಂಘ, ವಂಚಿತ್ ಬಹುಜನ್ ಅಘಾಡಿ ರಾಜಕೀಯ ಸಂಘಟನೆಗಳನ್ನು ಬೆಳೆಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ನಗರದಲ್ಲಿ ಮೇ 27 ಮತ್ತು 28 ರಂದು ಎರಡು ದಿನ ನಡೆಯಲಿರುವ 9 ನೇ ಮೇ ಸಾಹಿತ್ಯ ಮೇಳದಲ್ಲಿ ಡಾ. ಬಿ. ಆರ್ ಅಂಬೇಡ್ಕರ್ ಅವರ ಮೊಮ್ಮಗರಾದ ಬಾಳಾಸಾಹೇಬ ಎಂದೇ ಖ್ಯಾತರಾಗಿರುವ ಪ್ರಕಾಶ್ ಯಶವಂತ್ ಅಂಬೇಡ್ಕರ್ ಅವರು ಭಾಗವಹಿಸುವ ಕಾರಣ ಈ ಕಾರ್ಯಕ್ರಮಕ್ಕೆ ಸಮಸ್ತ ಅಂಬೇಡ್ಕರ್ ಅನುಯಾಯಿಗಳು, ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.