ಮೇ.26ರಂದು ರಾಜ್ಯಮಟ್ಟದ ಅಭಿನಂದನಾ ಸಮಾವೇಶ


ಸಂಜೆವಾಣಿ ವಾರ್ತೆ
ಬಳ್ಳಾರಿ, ಮೇ.23 : ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 112 ಪ್ರಗತಿಪರ ಹಾಗೂ ಸಾಮಾಜಿಕ ಸಂಘ-ಸಂಸ್ಥೆಗಳ ಐಕ್ಯ ವೇದಿಕೆಯಾಗಿ ಹೊರಹೊಮ್ಮಿದ ‘ಎದ್ದೇಳು ಕರ್ನಾಟಕ’ ತಳ ಸಮುದಾಯಗಳನ್ನು ಜಾಗೃತಗೊಳಿಸುವುದರಲ್ಲಿ ವಿಶೇಷ ಪಾತ್ರ ನಿರ್ವಹಿಸಿತು. ಒಟ್ಟು 103 ಕ್ಷೇತ್ರಗಳನ್ನು ಸೂಕ್ಷ್ಮ ಎಂದು ಗುರುತಿಸಿ, ಅದರಲ್ಲಿ ಜಾತ್ಯಾತೀತ ಸಮುದಾಯಗಳ ಮತದಾನದ ಪ್ರಮಾಣವನ್ನು ಹೆಚ್ಚಿಸಲು, ಮತ ವಿಭಜನೆಯಾಗದಂತೆ ತಡೆಯಲು ವಿಶೇಷ ಪ್ರಯತ್ನ ಹಾಕಿ ಕೆಲಸ ಮಾಡಲಾಯಿತು. ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಬಲ್ಲ ಅಭ್ಯರ್ಥಿ ಯಾರೆಂದು ಗುರುತಿಸಿ ಅವರಿಗೆ ಮಾತ್ರವೇ ಮತ ಹಾಕಿ ಎಂಬ ಕಾರ್ಯನೀತಿಯು ಬಿಜೆಪಿಯ ಸೋಲಿನಲ್ಲಿ ದೊಡ್ಡ ಪಾತ್ರ ನಿರ್ವಹಿಸಿತು.ಈ ನಿಟ್ಟಿನಲ್ಲಿ ಮೇ 26ರಂದು ರಾಜ್ಯಮಟ್ಡದ ಅಭಿನಂದನಾ ಸಮಾರಂಭವನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಏದ್ದೇಳು ಕರ್ನಾಟಕ ಕೇಂದ್ರ ಸಮಿತಿಯ ಸದಸ್ಯರು, ಹಾಗೂ ಜಿಲ್ಲಾ ಸಂಯೋಜಕರಾದ ಕರಿಯಪ್ಪ ಗುಡಿಮನಿ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು., ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.
ಸಾರ್ವಜನಿಕರು ಬೆಲೆ ಏರಿಕೆ, ಭ್ರಷ್ಟಾಚಾರದ, ಕೋಮುಧ್ವೇಷದಿಂದ ಬೇಸತ್ತು  ಕಾಂಗ್ರೆಸ್ಗೆ ಮತ ನೀಡಿದ್ದಾರೆ. ಕಾಂಗ್ರೆಸ್ಸಿನ ಐದು ಗ್ಯಾರಂಟಿಗಳು ಕೂಡಲೇ ಜಾರಿ ಮಾಡಿ ಬಡವರಿಗೆ ಸರ್ಕಾರ ನೆರವಾಗಬೇಕು ಎಂದರು.
ಕಂಡರಿಯದ ಭ್ರಷ್ಟಾಚಾರ, ಬೆಲೆ ಏರಿಕೆ ಹಾಗೂ ದ್ವೇಷ ರಾಜಕಾರಣಕ್ಕೆ ಕುಖ್ಯಾತಿ ಪಡೆದಿದ್ದ ಬಿಜೆಪಿ ಸೋತು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಈ ವಿಜಯ ಕಾಂಗ್ರೆಸ್ ಪಕ್ಷದ ವಿಜಯ ಮಾತ್ರವಾಗಿರದೆ ಇಡೀ ನಾಡಿನ ಜನತೆಯ ವಿಜಯವಾಗಿದೆ. ಈ ಜನವಿರೋಧಿ ಆಡಳಿತವನ್ನು ಅಂತ್ಯಗೊಳಿಸಬೇಕೆಂದು ನಾಡಿನ ಎಲ್ಲಾ ಪ್ರಗತಿಪರ ಸಂಘಟನೆಗಳು, ಮಹಿಳಾ ಸಂಘಟನೆಗಳು, ತಳ ಸಮುದಾಯಗಳು, ಅಲ್ಪಸಂಖ್ಯಾತ, ದಲಿತ, ಆದಿವಾಸಿ, ಹಿಂದುಳಿದ ಜನ ಸಮುದಾಯಗಳ ಸಂಘ ಸಂಸ್ಥೆಗಳು ಅಪಾರ ಶ್ರಮವಹಿಸಿ ಕೆಲಸ ಮಾಡಿವೆ. ಈ ಪೈಕಿ ‘ಎದ್ದೇಳು ಕರ್ನಾಟಕ’ ಎಂಬ ಹೆಸರಿನಲ್ಲಿ ನಡೆದ ನಾಗರಿಕ ಸಮಾಜದ ಸಂಘಟಿತ ಪ್ರಯತ್ನ ವಿಶೇಷ ಪರಿಣಾಮವನ್ನು ಬೀರಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಯೋಜಕ ವಸಂತ ರಾಜ್ ಕಹಳೆ, ರಾಮಕೃಷ್ಣ, ಕಂಪ್ಲಿ ತಾಲ್ಲೂಕು ಸಂಯೋಜಕ ಕೆ.ನೀಲಪ್ಪ, ಸೈಯ್ಯದ್ ಅಮ್ಜದ್, ಲತಿಫ್ ಅಹ್ಮದ್, ಮೋಹನ್, ಮತ್ತಿತರರು ಉಪಸ್ಥಿತರಿದ್ದರು.