ಮೇ.23 ರಿಂದ ಜೂನ್.3ರವರೆಗೆ ದ್ವಿತೀಯ ಪಿಯು ಪೂರಕ ಪರೀಕ್ಷೆ

ಚಿತ್ರದುರ್ಗ.ಮೇ.೧೭: ಮೇ.23 ರಿಂದ ಜೂನ್.3ರ ವರೆಗೆ ದ್ವಿತೀಯ ಪಿಯು ಪೂರಕ ಪರೀಕ್ಷೆಗಳು ನಡೆಯಲಿವೆ. ಜಿಲ್ಲೆಯಲ್ಲಿ 4782 ವಿದ್ಯಾರ್ಥಿಗಳು ಪೂರಕ ಪರೀಕ್ಷೆ ಬರೆಯಲಿದ್ದು, ಒಟ್ಟು 9 ಪರೀಕಾ ್ಷಕೇಂದ್ರದಲ್ಲಿ ಪರೀಕ್ಷೆ ಜರುಗಲಿದೆ.ಈ ಕುರಿತು ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ  ಪೂರ್ವಭಾವಿ ಸಭೆ ಜರುಗಿತು.ಪರೀಕ್ಷಾ ಕೇಂದ್ರಗಳ ಸುತ್ತ ಅಗತ್ಯ ಬಂದೊಬಸ್ತ್ ಕಲ್ಪಿಸಬೇಕು. ಪೂರಕ ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳಿಗೆ ಗೊಂದಲವಾಗದಂತೆ ಮಾಹಿತಿಯನ್ನು ನೀಡಬೇಕು. ಸೂಕ್ತ ಪೊಲೀಸ್ ರಕ್ಷಣೆಯಲ್ಲಿಯೇ ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷೆ ಕೇಂದ್ರಗಳಿಗೆ ಕೊಂಡಯ್ಯಬೇಕು. ವೀಕ್ಷಕರನ್ನಾಗಿ ನೇಮಿಸಿರುವ ಅಧಿಕಾರಿಗಳು ಪರೀಕ್ಷೆಗೆ ವೇಳೆ ಎರೆಡು ಗಂಟೆ ಮುಂಚಿತವಾಗಿಯೇ ಕೇಂದ್ರಗಳಿಗೆ ತೆರಳಬೇಕು. ವೀಕ್ಷಕರ ನೇತೃತ್ವದಲ್ಲಿ ಪ್ರಶ್ನೆ ಪತ್ರಿಕೆಗಳ ಬಂಡಲ್‍ಗಳನ್ನು ಪಡೆದುಕೊಂಡು ನಿಯಮಾನುಸಾರ ತೆರೆಯಬೇಕು. ಪರೀಕ್ಷೆಗೆ ಗೈರು ಹಾಜರಾದವರ ವಿದ್ಯಾರ್ಥಿಗಳ ಮಾಹಿತಿಯನ್ನು ಆನ್‍ಲೈನ್ ಮೂಲಕ ಪಿ.ಯು. ಮಂಡಳಿಗೆ ಕಳುಹಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಬಳಕೆಗೆ ಅವಕಾಶವಿಲ್ಲ. ಪ್ರಶ್ನೆ ಪತ್ರಿಕೆಗಳ ರಕ್ಷಣೆಗಾಗಿ  ನೇಮಿಸಿರುವ ವಿಶೇಷ ಪ್ರಶ್ನೆಪತ್ರಿಕಾ ಪಾಲಕರ ತ್ರಿ ಸದಸ್ಯ ಸಮತಿ ನಿಯಮಾನುಸಾರ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ ಸೂಚನೆ ನೀಡಿದರು.