ಮೇ 22 ಕೈವಾರ ತಾತಯ್ಯನವರ ಆರಾಧನೆ

ಕೋಲಾರ, ಮೇ.೧೫-ತಾಲ್ಲೂಕಿನ ಪ್ರಸಿದ್ದ ಯಾತ್ರಾಸ್ಥಳ ಶ್ರೀಕ್ಷೇತ್ರ ಕೈವಾರದಲ್ಲಿ ತ್ರಿಕಾಲಜ್ಞಾನಿ, ಸಂತ ಸದ್ಗುರು ಶ್ರೀ ಯೋಗಿ ನಾರೇಯಣ ತಾತಯ್ಯನವರ ೧೮೮ನೇ ಆರಾಧನಾ ಮಹೋತ್ಸವವನ್ನು ಮೇ ೨೨ ರಂದು ಶ್ರದ್ದಾಭಕ್ತಿಗಳಿಂದ ಆಚರಿಸಲಾಗುವುದು ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ||ಎಂ.ಆರ್.ಜಯರಾಮ್ ರವರು ತಿಳಿಸಿದ್ದಾರೆ.
ಆರಾಧನೆಯ ಪರ್ವ ಮಹೋತ್ಸವದ ದಿನದಂದು ಸದ್ಗುರು ತಾತಯ್ಯನವರಿಗೆ ವಿಶೇಷ ಅಭಿಷೇಕ, ಅಷ್ಟವಧಾನ ಸೇವೆ, ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ನಂತರ ಸದ್ಗುರು ತಾತಯ್ಯನವರನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಸಭಾಂಗಣಕ್ಕೆ ಕರೆತರಲಾಗುವುದು. ಪ್ರತಿವರ್ಷದಂತೆ ಈ ಸಮಾರಂಭದಲ್ಲಿ ಭಾಗವಹಿಸುವ ಎಲ್ಲಾ ಸಾಧು – ಸತ್ಪುರುಷರಿಗೆ ಕಾಷಾಯ ವಸ್ತ್ರವನ್ನು ಉಚಿತವಾಗಿ ನೀಡಲಾಗುತ್ತದೆ. ಸದ್ಗುರು ತಾತಯ್ಯನವರಿಗೆ ೨೦೨೨-೨೩ನೇ ಸಾಲಿನ ವಾರ್ಷಿಕ ವರದಿಯನ್ನು ಸಮರ್ಪಿಸಲಾಗುತ್ತದೆ ನಂತರ ತಾತಯ್ಯನವರ ಸಂದೇಶವನ್ನು ನೀಡಲಾಗುತ್ತದೆ ಎಂದರು.
ಸದ್ಗುರು ತಾತಯ್ಯನವರ ಜೀವ ಸಮಾಧಿ ಪ್ರವೇಶ ಮಹೋತ್ಸವ ಆರಾಧನೆಯ ಅಂಗವಾಗಿ ೨೧ ರಂದು ಭಾನುವಾರ ಬೆಳಿಗ್ಗೆ ವಿಶೇಷ ಹೋಮವನ್ನು ಹಮ್ಮಿಕೊಳ್ಳಲಾಗಿದೆ. ಅಂದು ರಾತ್ರಿ ಕ್ಷೇತ್ರದ ಭಜನಾ ಮಂದಿರದಲ್ಲಿ ಅಖಂಡ ನಾಮ ಸಂಕೀರ್ತನಾ ಭಜನಾ ಕಾರ್ಯಕ್ರಮಗಳು ನಡೆಯುತ್ತದೆ ಎಂದರು.
ಸದ್ಗುರು ತಾತಯ್ಯನವರ ಭಜನಾ ಭಕ್ತ ಮಂಡಳಿಯವರಿಗೆ ಆಹ್ವಾನ ಪತ್ರಿಕೆಗಳನ್ನು ಹಂಚಲಾಯಿತು. ಶ್ರೀಯೋಗಿನಾರೇಯಣ ಸಂಕೀರ್ತನಾ ಯೋಜನೆಯ ಸಂಚಾಲಕರಾದ ವಾನರಾಶಿ ಬಾಲಕೃಷ್ಣ ಭಾಗವತರ್, ಟ್ರಸ್ಟ್ ಸದಸ್ಯರಾದ ಕೆ.ನರಸಿಂಹಪ್ಪ, ಆಡಳಿತಾಧಿಕಾರಿ ಕೆ.ಲಕ್ಷ್ಮೀನಾರಾಯಣ್, ಉಪನ್ಯಾಸಕ ವೆಂಕಟರಮಣಪ್ಪ, ಬೈಯ್ಯಪ್ಪಸ್ವಾಮಿ, ಮದ್ದಿರೆಡ್ಡಿ, ರವಿಕುಮಾರ್, ಲೋಕೆಶ್ ಮುಂತಾದವರು ಉಪಸ್ಥಿತರಿದ್ದರು.