ಮೇ 21ರಂದು ಕ್ಯಾನ್ಸರ್ ಉಚಿತ ತಪಾಸಣಾ ಶಿಬಿರ

ಕಲಬುರಗಿ,ಮೇ.16: ನಗರದ ಸಂಗಮೇಶ್ವರ್ ಕಾಲೋನಿಯ ದತ್ತ ಮಂದಿರದ ಹತ್ತಿರ ಇರುವ ಶಂಕರ್ ಮಠದಲ್ಲಿ ಮೇ 21ರಂದು ಬೆಳಿಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ಕ್ಯಾನ್ಸರ್ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಶೃಂಗೇರಿ ಶಾಖಾ ಮಠದ ವಿಶೇಷ ಪ್ರತಿನಿಧಿ ಪಿ.ಹೆಚ್. ಕುಲಕರ್ಣಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಶಾರದಾ ಶಂಕರ್ ಭಜನಾ ಮಂಡಳಿ, ಶ್ರೀ ಶಂಕರ್ ಅಷ್ಟೋತ್ತರ ಮಂಡಳಿ ಜಂಟಿ ಆಶ್ರಯದಲ್ಲಿ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.
ಶಿಬಿರದಲ್ಲಿ ಬೆಂಗಳೂರಿನ ಶ್ರೀ ಶಂಕರ್ ಕ್ಯಾನ್ಸರ್ ಹಾಸ್ಪಿಟಲ್‍ನ ನುರಿತ, ತಜ್ಞ ವೈದ್ಯರಿಂದ ಉಚಿತ ತಪಾಸಣೆ ಜರುಗಲಿದೆ. ಮಹಿಳೆಯರು, ಪುರುಷರು ಸೇರಿದಂತೆ ಎಲ್ಲರಿಗೂ ತಪಾಸಣೆ ಮಾಡಲಾಗುವುದು. ಪರೀಕ್ಷೆ ಮಾಡಿಸಿಕೊಳ್ಳುವವರು ತಮ್ಮ ಹೆಸರು, ವಯಸ್ಸು, ಮೊಬೈಲ್ ನಂಬರ್ ನೀಡಿ ನೊಂದಾಯಿಸಿಕೊಳ್ಳಬೇಕು. ತಪಾಸಣೆಗೆ ಆಗಮಿಸುವ ಶಿಬಿರಾರ್ಥಿಗಳಿಗೆ ಉಚಿತ ಊಟದ ವ್ಯವಸ್ಥೆಯನ್ನೂ ಸಹ ಮಾಡಲಾಗಿದೆ ಎಂದು ಅವರು ಹೇಳಿದರು.
ಕರ್ನಾಟಕದಲ್ಲಿ ಪ್ರತಿ ವರ್ಷ 35 ಸಾವಿರ ಹೊಸ ಕ್ಯಾನ್ಸರ್ ರೋಗಿಗಳಿಉ ಸೇರ್ಪಡೆಯಾಗುತ್ತಿದ್ದಾರೆ. ಅದರಲ್ಲಿ ಶೇಕಡಾ 50ರಷ್ಟು ಪುರುಷರು, ಶೇಕಡಾ 25ರಷ್ಟು ಮಹಿಳೆಯರು ಕ್ಯಾನ್ಸರ್ ರೋಗದಿಂದ ನರಳುತ್ತಿದ್ದಾರೆ. ದೇಹದ ಒಂದು ಭಾಗದ ಅಸಹಜ ಜೀವಕೋಶಗಳ ಅನಿಯಂತ್ರಿತ ಬೆಳವಣಿಗೆಯಿಂದ ಉಂಟಾಗುವ ರೋಗವೇ ಕ್ಯಾನ್ಸರ್. ಇದನ್ನು ತಡೆಗಟ್ಟಬಹುದಾಗಿದೆ. ಹಾಗಾಗಿ ಸೇವಿಸುವ ಆಹಾರದಲ್ಲಿ ಹೆಚ್ಚು ಕೊಬ್ಬಿನಾಂಶಯುಕ್ತ ಪದಾರ್ಥಗಳನ್ನು ಮತ್ತು ಎಣ್ಣೆ ಪದಾರ್ಥಗಳನ್ನು ನಿಯಂತ್ರಿಸಿ ತಾಜಾ ಆಹಾರವನ್ನು ಉಪಯೋಗಿಸಿ ಹೆಚ್ಚಿಗೆ ಹಣ್ಣು ಮತ್ತು ತರಕಾರಿಗಳನ್ನು ಉಪಯೋಗಿಸಿ ತಂಬಾಕಿನಿಂದ ತಯಾರಿಸಲ್ಪಟ್ಟ ಯಾವುದೇ ತರಹದ ಬೀಡಿ, ಸಿಗರೇಟು, ನಶ್ಯ, ಹೊಗೆಸೊಪ್ಪು ಮತ್ತು ಎಲೆ ಅಡಿಕೆ ಉಪಯೋಗಿಸದೇ ಇರುವುದು, ಪ್ರತಿ ದಿನ ಸ್ನಾನ ಮಾಡುವುದು, ಶರೀರ ಹಾಗೂ ಜನನಾಂಗಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.
ಸಾಮಾನ್ಯವಾಗಿ 50 ವರ್ಷದೊಳಗಿನ ಮಹಿಳೆಯರಲ್ಲಿ ಕಾಣುವಂತಹ ಕ್ಯಾನ್ಸರ್ ಎಹ್‍ಪಿವಿ ಎಂಬ ವೈರಸ್‍ನಿಂದ ಉಂಟಾಗುವ ರೋಗವಿದು. ಕ್ಯಾನ್ಸರನ್ನು ಪ್ಯಾಪ್ ಸ್ಮಿಯರ್ ತಪಾಸಣೆ ಮೂಲಕ ಪತ್ತೆ ಹಚ್ಚಬಹುದು. ಮುಂಜಾಗ್ರತಾ ಕ್ರಮವಾಗಿ 30ರಿಂದ 65 ವಯಸ್ಸಿನ ಮಹಿಳೆಯರು ಕನಿಷ್ಠ ಮೂರು ವರ್ಷಕ್ಕೆ ಒಂದು ಬಾರಿಯಾದರೂ ಪ್ಯಾಪ್ ಸ್ಮಿಯರ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಮಲ ಮೂತ್ರ ವಿಸರ್ಜನೆಯಲ್ಲಿ ಬದಲಾವಣೆ ಹಾಗೂ ರಕ್ತ ಕಂಡುಬರುವುದು, ರೋಗಿಯ ದೇಹದಲ್ಲಿ ಎಲ್ಲಿಯಾದರೂ ವಿವರಿಸಲಾಗದ ಗಡ್ಡೆ, ಊತ, ಬಿಗಿತ ಕಂಡುಬರುವುದು. ನಿರಂತರ ಹೊಟ್ಟೆನೋವು ಅಥವಾ ಊತ ಮಾಯವಾಗದ ಬೆನ್ನು ನೋವು ಅಥವಾ ಮೂಳೆಯಲ್ಲಿನ ನೋವು, ವಿವರಿಸಲಾಗದ ರೋಗಗ್ರಸ್ತವಾಗುವಿಕೆ, ನಡವಳಿಕೆಯಲ್ಲಿನ ಬದಲಾವಣೆಗಳು ಹಾಗೂ ನಿವಾರಣೆಯಾಗದ ತಲೆನೋವು, ಮೂರು ವಾರಗಳಲ್ಲಿ ಗುಣವಾಗದ ಗಾಯ ಅಥವಾ ಹುಣ್ಣು, ಆಗಾಗ್ಗೆ ವಿವರಿಸಲಾಗದ ಮೂಗೇಟುಗಳು, ಅಸಮಾನ್ಯ ತೆಳುವಾಗುವಿಕೆ, ಕೆಂಪು ಅಥವಾ ನೇರಳೆ ಕಲೆಗಳು ಮತ್ತು ವಿವರಿಸಲಾಗದ ರಕ್ತಸ್ರಾವ, ಸಾರ್ವಕಾಲಿಕ ದಣಿವು, ಆಗಾಗ್ಗೆ ಸೋಂಕು, ವಿವರಿಸಲಾಗದ ಜ್ವರ, ಜ್ವರದ ಲಕ್ಷಣಗಳು, ವಿವರಿಸಲಾಗದ ತೂಕನಷ್ಟ, ಉಸಿರಾಟದಲ್ಲಿನ ತೊಂದರೆ, ನುಂಗುವುದರಲ್ಲಿ ತೊಂದರೆ, ಧ್ವನಿಯಲ್ಲಿನ ವ್ಯತ್ಯಾಸ, ಒರಟುತನ ಮುಂತಾದವರು ಕ್ಯಾನ್ಸರಿನ ಎಚ್ಚರಿಕೆಯ ಚಿಹ್ನೆಗಳಾಗಿವೆ ಎಂದು ಅವರು ತಿಳಿಸಿದರು.
ಶಿಬಿರದಲ್ಲಿ ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್ ತಪಾಸಣೆ ಮಾಡಲಾಗುವುದು. 30 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು, ಕ್ಯಾನ್ಸರ್‍ನ ಕುಟುಂಬ ಇತಿಹಾಸ ಇರುವ ವ್ಯಕ್ತಿಗಳು, ಎಲ್ಲ ವಿಧದ ತಂಬಾಕು ಬಳಕೆದಾರರು, ಎಲ್ಲ ಅಲ್ಕೋಹಾಲ್ ಬಳಕೆದಾರರು, ಎಲ್ಲ ಅಡಿಕೆ ಬಳಕೆದಾರರು ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಡಾ. ಮೇಘಾ ಕಮಲಾಪೂರಕರ್, ಡಾ. ಸದಾಶಿವ್ ಜಿಡಗೇಕರ್, ಪ್ರವೀಣ್ ಕುಲಕರ್ಣಿ, ನಾಗೇಶ್ ಮೊಹರೀರ್ ಮುಂತಾದವರು ಉಪಸ್ಥಿತರಿದ್ದರು.