ಮೇ 20 ಮತ್ತು 21ರಂದು ಸಾಮಾನ್ಯ ಪ್ರವೇಶ ಪರೀಕ್ಷೆ

ಚಿತ್ರದುರ್ಗ. ಮೇ.17;  ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಇದೇ ಮೇ 20 ಮತ್ತು 21ರಂದು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದೆ. ಜಿಲ್ಲೆಯ 11 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 5379 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದು, ಸಿಇಟಿ ಪರೀಕ್ಷೆಯನ್ನು ಸುಗಮವಾಗಿ ನಡೆಸುವಂತೆ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಸಾಮಾನ್ಯ ಪ್ರವೇಶ ಪರೀಕ್ಷಾ ಸಿದ್ದತೆ ಕುರಿತು ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಜಿಲ್ಲೆಯಲ್ಲಿ ಯಾವುದೇ ಪರೀಕ್ಷಾ ಅವ್ಯವಹಾರ ನಡೆಯದಂತೆ ತುಂಬಾ ನಿಗಾವಹಿಸಿ, ಪಾರದರ್ಶಕವಾಗಿ ಪರೀಕ್ಷೆ ನಡೆಸಬೇಕು ಎಂದರು.ಸಾಮಾನ್ಯ ಪ್ರವೇಶ ಪರೀಕ್ಷೆ ಸಂಬಂಧ 11 ಪರೀಕ್ಷಾ ಕೇಂದ್ರಗಳಿಗೆ ವೀಕ್ಷಕರನ್ನು ನೇಮಿಸಲಾಗಿದೆ. ಪ್ರಶ್ನೆ ಪತ್ರಿಕೆ ಪಾಲಕರು ಮತ್ತು ವಿಶೇಷಾ ಜಾಗೃತದಳದ ಸದಸ್ಯರು ಹಾಗೂ ತ್ರಿಸದಸ್ಯ ಸಮಿತಿಯ ನಾಲ್ಕು ತಂಡಗಳ ರಚಿಸಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾ ಖಜಾನೆಯಿಂದ ಪ್ರಶ್ನೆ ಪತ್ರಿಕೆಗಳನ್ನು ಕೊಂಡೊಯ್ಯುವ ಮತ್ತು ವಿತರಣೆ ಮಾಡುವ ಸಮಯಕ್ಕೆ ಪ್ರತಿ ತಾಲ್ಲೂಕಿನ ಮಾರ್ಗಾಧಿಕಾರಿಗಳ ಜೊತೆಗೆ ಪೊಲೀಸ್ ರಕ್ಷಣೆ ನೀಡಬೇಕು. ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷೆ ಪ್ರಾರಂಭವಾಗುವುದಕ್ಕಿಂತ ಒಂದು ಗಂಟೆ ಮೊದಲು ಹಾಗೂ ಪರೀಕ್ಷೆ ನಂತರ 30 ನಿಮಿಷಗಳು ಪೊಲೀಸ್ ಬಂದೋಬಸ್ತಿನ ಅವಶ್ಯಕತೆ ಇರುತ್ತದೆ ಎಂದರು.ವಿಜ್ಞಾನ ವಿಷಯವನ್ನು ಬೋಧಿಸುವ ಉಪನ್ಯಾಸಕರು, ಶಿಕ್ಷಕರು ಹಾಗೂ ಸಂಬಂಧಿಕರ, ಸ್ವಂತ ಮಕ್ಕಳು ಸಿಇಟಿ ಪರೀಕ್ಷೆಗೆ ಹಾಜರಾಗುತ್ತಿದ್ದರೆ ಅಂತಹ ಉಪನ್ಯಾಸಕರು, ಶಿಕ್ಷಕರನ್ನು ಪರೀಕ್ಷಾ ಕಾರ್ಯಕ್ಕೆ ನಿಯೋಜಿಸುವಂತೆ ಇಲ್ಲ ಎಂದು ಸೂಚನೆ ನೀಡಿದರು.
ಪರೀಕ್ಷಾ ಕೇಂದ್ರದ ಸುತ್ತಮುತ್ತಲಿರುವ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಿಸುವುದು ಮತ್ತು ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶ ಎಂದು ಘೋಷಿಸಲಾಗುವುದು ಎಂದು ಹೇಳಿದರು.ಮೊಬೈಲ್ ಬಳಕೆ ನಿಷೇಧ, ವಾಚ್ ಹಾಗೂ ಆಭರಣ ಧರಿಸುವಂತಿಲ್ಲ:ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಎಲೆಕ್ಟ್ರಾನಿಕ್ ಉಪಕರಣಗಳು, ಮೊಬೈಲ್ ಫೋನುಗಳನ್ನು ತರುವುದು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ವಾಚ್, ಆಭರಣ, ತುಂಬು ತೋಳಿನ ವಸ್ತ್ರಗಳನ್ನು ಧರಿಸುವಂತಿಲ್ಲ. ಪರೀಕ್ಷಾ ಕೇಂದ್ರದ ಒಳಗೆ ಗೋಡೆ ಗಡಿಯಾರ ಇರುತ್ತದೆ. ವಿದ್ಯಾರ್ಥಿಗಳು ಸರಿಯಾಗಿ ತಪಾಸಣೆ ಮಾಡಿ  ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಿಕೊಡಬೇಕು. ಸಿಇಟಿ ಪರೀಕ್ಷೆಗಳ ಮೂಲಕ ಪ್ರತಿಭಾವಂತ  ವಿದ್ಯಾರ್ಥಿಗಳು ಮೆಡಿಕಲ್ ಹಾಗೂ ಇಂಜಿನಿಯರ್ ವ್ಯಾಸಂಗದ ಸೀಟುಗಳನ್ನು ಪಡೆಯುಲಿದ್ದಾರೆ.ಕೊಠಡಿ ಮೇಲ್ವಿಚಾರಕರಾಗಿ ಯಾವುದೇ ಕಾರಣಕ್ಕೆ ವಿಜ್ಞಾನ ಉಪನ್ಯಾಸಕರನ್ನು ನಿಯೋಜಿಸಬಾರದು. ಕಲಾ ಮತ್ತು ವಾಣಿಜ್ಯ ವಿಭಾಗದ ಉಪನ್ಯಾಸಕರನ್ನು ನಿಯೋಜಿಸಬೇಕು ಎಂದು ಪರೀಕ್ಷಾ ಕೇಂದ್ರದ ಮುಖ್ಯಸ್ಥರಿಗೆ ಸೂಚಿಸಿದರು.ಪರೀಕ್ಷಾ ಕೇಂದ್ರಗಳಲ್ಲಿ ಉಪನ್ಯಾಸಕರು, ಕಚೇರಿ ಸಿಬ್ಬಂದಿಯವರು ಪರೀಕ್ಷೆ ನಡೆಯುವ ಅವಧಿಯಲ್ಲಿ ಮೊಬೈಲ್ ಫೋನುಗಳನ್ನು ತರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಮುಖ್ಯ ಅಧೀಕ್ಷಕರು ಬೇಸಿಕ್ ಸೆಟ್ ಉಪಯೋಗಿಸಲು ಅವಕಾಶ ನೀಡಿದೆ ಎಂದರು.ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ರಾಜು ಮಾತನಾಡಿ, ಇದೇ ಮೇ 20 ಮತ್ತು 21ರಂದು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದೆ. ಚಿತ್ರದುರ್ಗ ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು, ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು, ಎಂ.ಕೆ.ಹಟ್ಟಿ ಎಸ್‍ಜೆಎಂ ಪದವಿಪೂರ್ವ ಕಾಲೇಜು, ಪಿ.ಕೆ.ಹಳ್ಳಿ ಕೆಎಂಎಸ್ ಪದವಿಪೂರ್ವ ಕಾಲೇಜು, ಎಸ್‍ಆರ್‍ಎಸ್ ಪದವಿಪೂರ್ವ ಕಾಲೇಜು, ಮಹಾರಾಣಿ ಪದವಿಪೂರ್ವ ಕಾಲೇಜು, ವಾಸವಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಡಾನ್‍ಬಾಸ್ಕೋ ಪದವಿಪೂರ್ವ ಕಾಲೇಜು, ಗಾರೇಹಟ್ಟಿ ಬೃಹನ್ಮಠ ಪದವಿಪೂರ್ವ ಕಾಲೇಜು, ಹೊಳಲ್ಕೆರೆ ರಸ್ತೆಯ ಎಸ್‍ಜೆಎಂ ಪದವಿಪೂರ್ವ ಕಾಲೇಜು, ಚಿನ್ಮೂಲಾದ್ರಿ ಪದವಿಪೂರ್ವ ಕಾಲೇಜು ಸೇರಿದಂತೆ ಒಟ್ಟು 11 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದರು.ಮೇ.20ರಂದು ಬೆಳಿಗ್ಗೆ 10 ರಿಂದ 11.50 ರವರೆಗೆ ಜೀವಶಾಸ್ತ್ರ, ಮಧ್ಯಾಹ್ನ 2.30 ರಿಂದ 3.50 ರವರೆಗೆ ಗಣಿತ ಶಾಸ್ತ್ರ ವಿಷಯದ ಪರೀಕ್ಷೆ ನಡೆಯಲಿದೆ. ಮೇ.21ರಂದು ಬೆಳಿಗ್ಗೆ 10.30 ರಿಂದ 11.50 ರವರೆಗೆ ಭೌತಶಾಸ್ತ್ರ ಹಾಗೂ ಮಧ್ಯಾಹ್ನ 2.30 ರಿಂದ 3.50 ರವರೆಗೆ ರಸಾಯನಶಾಸ್ತ್ರ ವಿಷಯದ ಪರೀಕ್ಷೆ ನಡೆಯಲಿದೆ ಎಂದರು.ಸಭೆಯಲ್ಲಿ ತಹಶೀಲ್ದಾರ್ ಡಾ.ನಾಗವೇಣಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಇದ್ದರು.