ಮೇ 16 ರಾಷ್ಟ್ರೀಯ ಡೆಂಗ್ಯೂ ದಿನ: ಡಾ.ಪುನೀತ್

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.17: ಡೆಂಗ್ಯೂ ರೋಗದಿಂದ ಆಗುವ ಅಪಾಯಗಳು ಹಾಗೂ ರೋಗ ಬಾರದಂತೆ ವಹಿಸಬೇಕಾದ ಎಚ್ಚರಿಕೆಯ ಬಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಮೇ 16 ರಂದು “ರಾಷ್ಟ್ರೀಯ ಡೆಂಗ್ಯೂ ದಿನ” ವನ್ನಾಗಿ ಆಚರಿಸಲಾಗುತ್ತದೆ ಎಂದು ಬಂಡಿಹೊಳೆ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಪುನೀತ್ ತಿಳಿಸಿದರು.
ಅವರು ತಾಲ್ಲೂಕಿನ ಕಸಬಾ ಹೋಬಳಿಯ ಬಂಡಿಹೊಳೆ ಪ್ರಾಥಮಿಕ ಆರೋಗ್ಯಕೇಂದ್ರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಡೆಂಗ್ಯೂ ದಿನವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತದಲ್ಲಿ ಪ್ರತಿವರ್ಷ ಡೆಂಗ್ಯೂ ರೋಗಕ್ಕೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಡೆಂಗ್ಯೂ ಸಾಂಕ್ರಾಮಿಕ ರೋಗವಾಗಿದ್ದು, ಈಡೀಸ್ ಈಜಿಪ್ಟ್ ಎನ್ನುವ ಸೊಳ್ಳೆಯ ಕಡಿತದ ಮೂಲಕ ಮನುಷ್ಯರಿಗೆ ಹರಡುತ್ತದೆ. ತೀವ್ರ ಜ್ವರ, ತೀವ್ರವಾದ ತಲೆನೋವು, ಕಣ್ಣುಗಳ ಹಿಂದೆ ನೋವು, ಸ್ನಾಯು ಮತ್ತು ಕೀಲು ನೋವು, “ಮೂಳೆ ಮುರಿಯುವ ಜ್ವರ”, ವಾಕರಿಕೆ ಮತ್ತು ವಾಂತಿ, ದದ್ದುಗಳಂಥಹ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಡೆಂಗ್ಯೂ ಜ್ವರವನ್ನು ರಕ್ತ ಪರೀಕ್ಷೆಯಿಂದ ಮಾತ್ರ ಕಂಡು ಹಿಡಿಯಬಹುದು. ಶಂಕಿತ ಡೆಂಗ್ಯೂ ಜ್ವರ ಪ್ರಕರಣಗಳ ಪರೀಕ್ಷೆ ಹಾಗೂ ಚಿಕಿತ್ಸೆಯು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಿರುತ್ತದೆ. ಈ ವೈರಸ್ಗೆ ಯಾವುದೇ ನಿರ್ದಿಷ್ಟ ಔಷದ ಅಥವಾ ಚಿಕಿತ್ಸೆ ಇಲ್ಲದಿರುವುದರಿಂದ ಡೆಂಗ್ಯೂ ಜ್ವರದ ಚಿಕಿತ್ಸಾ ರೋಗಲಕ್ಷಣಗಳ ನಿರ್ವಹಣೆಯನ್ನು ಒಳಗೊಂಡಿರುತ್ತದೆ.
ಈಡಿಸ್ ಸೊಳ್ಳೆಗಳ ಉತ್ಪತ್ತಿ ತಡೆಗೆ ಮನೆಯಲ್ಲಿನ ನೀರಿನ ತೊಟ್ಟಿ ಬ್ಯಾರಲ್ ಡ್ರಮ್‍ಗಳಲ್ಲಿನ ನೀರನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಸ್ವಚ್ಛಗೊಳಿಸಬೇಕು, ಫ್ರಿಡ್ಜ್ ಹಿಂಭಾಗ ಹೂ ಕುಂಡ ಮತ್ತು ಹೂ ಕುಂಡದ ಕೆಳಗಿನ ತಟ್ಟೆಗಳಲ್ಲಿ ಶೇಖರಣೆಯಾಗುವ ನೀರನ್ನು ನಿಯಮಿತವಾಗಿ ಖಾಲಿ ಮಾಡಬೇಕು, ಮನೆಯ ಸುತ್ತ-ಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಿ ಘನ ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡಬೇಕು, ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು, ಹಗಲು ಹೊತ್ತಿನಲ್ಲಿ ವಿಶ್ರಾಂತಿ ಪಡೆಯುವವರು ವಿಶೇಷವಾಗಿ ವೃದ್ಧರು ಗರ್ಭಿಣಿಯರು ಹಾಗೂ ಮಕ್ಕಳು ಸೊಳ್ಳೆ ಪರದೆಯನ್ನು ಬಳಸಬೇಕು, ಡೆಂಗ್ಯೂ ಮತ್ತು ಚಿಕೂನ್‍ಗುನ್ಯ ರೋಗಿಗಳು ತಪ್ಪದೆ ಸೊಳ್ಳೆಯ ಪರದೆಯನ್ನು ಉಪಯೋಗಿಸಬೇಕು, ಸೊಳ್ಳೆಗಳು ಕಚ್ಚದಂತೆ ಮೈ ತುಂಬಾ ಬಟ್ಟೆ ಧರಿಸಿ ಸೊಳ್ಳೆ ಪರದೆ ಮುಲಾಮು ದ್ರಾವಣವನ್ನು ಉಪಯೋಗಿಸಬೇಕು, ಈಡಿಸ್ ಲಾರ್ವಾ ಸಮೀಕ್ಷೆಗಾಗಿ ಮನೆಗಳಿಗೆ ಭೇಟಿ ನೀಡುವ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಅಗತ್ಯ ಸಹಕಾರವನ್ನು ನೀಡಿ, ಅವರು ನೀಡುವ ಸಲಹೆಗಳನ್ನು ಪಾಲಿಸಬೇಕು ಎಂದರು.
ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯಾಧಿಕಾರಿಗಳು , ಆಸ್ಪತ್ರೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಮತ್ತು ಸಾರ್ವಜನಿಕರು ಹಾಜರಿದ್ದರು.