ಮೇ.14ರಂದು ಔರಾದನಲ್ಲಿ ಅದ್ದೂರಿ ಬಸವ ಜಯಂತಿ

ಔರಾದ್ :ಮೇ.11: ವಿಶ್ವಗುರು ಬಸವಣ್ಣನವರ 891ನೇ ಜಯಂತಿ ಉತ್ಸವವನ್ನು ಮೇ.14ರಂದು ಪಟ್ಟಣದಲ್ಲಿ ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಡಾ. ಧನರಾಜ ರಾಗಾ ಹೇಳಿದರು.

ಶುಕ್ರವಾರ ಪಟ್ಟಣದಲ್ಲಿ ಮೇ.14ರಂದು ನಡೆಯಲಿರುವ ಬಸವ ಜಯಂತಿ ಆಚರಣೆಯ ಪ್ರಚಾರಾರ್ಥ ಭಿತ್ತಿ ಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬರುವ ಇದೆ ಮೇ.14ರಂದು ಸಕಲ ಬಸವಾನುಯಾಯಿಗಳಿಂದ ಬಸವ ಜಯಂತಿ ಕಾರ್ಯಕ್ರಮ ನಡೆಯಲಿದ್ದು ವಿಶೇಷ ಉಪನ್ಯಾಸ, ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು, ನೀಲಾಂಬಿಕಾ ಆಶ್ರಮದ ಡಾ. ಮಹಾದೇವಮ್ಮ ತಾಯಿ ಅವರು ದಿವ್ಯ ನೇತೃತ್ವ ವಹಿಸಲಿದ್ದಾರೆ. ಕಲಬುರಗಿ ಬಸವ ಮಾರ್ಗ ಪ್ರತಿಷ್ಠಾನದ ಅಧ್ಯಕ್ಷ ವಿಶ್ವರಾಧ್ಯ ಸತ್ಯಂಪೇಟೆ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಅಂದು ಸಂಜೆ 4ಕ್ಕೆ ನಡೆಯಲಿರುವ ಭವ್ಯ ಮೆವರಣೆ ಪಟ್ಟಣದ ಡಾ. ಚನ್ನಬಸವ ಪಟ್ಟದ್ದೇವರು ವೃತ್ತದಿಂದ ಆರಂಭವಾಗಲಿದ್ದು, ಕನ್ನಡಾಂಬೆ ವೃತ್ತ, ಬಸ್ ನಿಲ್ದಾಣ, ಶಿವಾಜಿ ವೃತ್ತ ಸೇರಿದಂತೆ ಮುಖ್ಯರಸ್ತೆಯ ಮಾರ್ಗವಾಗಿ ಬಸವೇಶ್ವರ ವೃತ್ತ ಬಳಿಯಲ್ಲಿ ವೇದಿಕೆಗೆ ತಲುಪಲಿದೆ. ಮೆರವಣಿಗೆಯಲ್ಲಿ ಪಟ್ಟಣ ಸೇರಿದಂತೆ ತಾಲೂಕಿನ ಸುತ್ತಮುತ್ತಲಿನ ಗ್ರಾಮಸ್ಥರು ಸಹಸ್ರಾರು ಸಂಖ್ಯೆ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದ ಪ್ರಯುಕ್ತ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸ್ವಾಮೀಜಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಮಾಜದ ಮುಖಂಡರು ಪಾಲ್ಗೊಳ್ಳುವರು. ಅಂದು ಬೆಳಿಗ್ಗೆ 8.30 ಗಂಟೆಗೆ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣಹಂಪಲು ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿವಿಧ ಸಮಾಜದಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದರು. ಕಾರ್ಯಕ್ರಮದ ಮುಂಚೆ ಷಟಸ್ಥಲ ಧ್ವಜಾರೋಹಣವನ್ನು ನೆರವೇರಿಸಲಿದ್ದಾರೆ.

ಮೆರವಣಿಗೆಗೆ ಮೆರಗು ನೀಡಲು ಜಾನಪದ ಕಲಾ ತಂಡ, ಡೊಳ್ಳು, ಕೋಲಾಟ, ಭಜನೆ ತಂಡಗಳು ಇತರ ಮಂಗಲವಾದ್ಯಗಳೊಂದಿಗೆ ಭವ್ಯ ಮೆರವಣಿಗೆ ನಡೆಯಲಿದೆ. ಪ್ರತಿ ಓಣಿಯಿಂದಲೂ ಯುವಕರು, ಯುವತಿಯರು ಪ್ರತ್ಯೆ?ಕವಾಗಿ ಮೆರವಣಿಗೆ ಮೂಲಕ ಆಗಮಿಸಿ ಬಸವೇಶ್ವರ ವೃತ್ತದಲ್ಲಿ ಸಮಾವೇಶಗೊಳ್ಳಲಿದೆ ಎಂದು ಡಾ. ಧನರಾಜ ರಾಗಾ ಹೇಳಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಭಿತ್ತಿಪತ್ರವನ್ನು ತಾಪಂ ಇಒ ವೆಂಕಟರಾವ ಶಿಂಧೆ, ತಾಪಂ ಸಹಾಯಕ ನಿರ್ದೇಶಕ ಸುದೇಶ್ ಜಂಟಿಯಾಗಿ ಬಿಡುಗಡೆ ಮಾಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್, ಗಜಾನಂದ ಮಳ್ಳಾ, ಜಗನ್ನಾಥ ಮೂಲಗೆ, ಗುರುರಾಜ್, ಮಲ್ಲಿಕಾರ್ಜುನ ಟಂಕಸಾಲೆ, ಕಲ್ಯಾಣರಾವ ಶೆಂಬೆಳ್ಳೆ, ಡಿಡಿ ಬೋಳೆಗಾವೆ, ಬಾಲಾಜಿ ಅಮರವಾಡಿ, ಅಶೋಕ ಶೆಂಬೆಳ್ಳಿ, ಪತ್ರಕರ್ತರಾದ ಅಂಬಾದಾಸ ನಳಗೆ, ಸಂತೋಷ ಚಾಂಡೇಶ್ವರ, ಬಸವರಾಜ ಶೆಟಕಾರ್ ಸೇರಿದಂತೆ ಇನ್ನಿತರರಿದ್ದರು.