ಮೇ 10 ರಂದು ಮರೆಯದೇ ಮತದಾನ ಮಾಡಿ


ಸಂಜೆವಾಣಿ ವಾರ್ತೆ
ಗಂಗಾವತಿ, ಏ.25: ತಾಲೂಕಿನ ಚಿಕ್ಕರಾಂಪುರ ಹಾಗೂ ಆನೆಗೊಂದಿ ಗ್ರಾಮದಲ್ಲಿ ತಾಲೂಕು ಪಂಚಾಯತ್ ಯೋಜನಾಧಿಕಾರಿಗಳಾದ ಗುರುಪ್ರಸಾದ ಅವರ ನೆತೃತ್ವದಲ್ಲಿ ಮನೆ ಮನೆ ಭೇಟಿ ನೀಡಿ ಮತದಾನ ಜಾಗೃತಿ ಮೂಡಿಸಲಾಯಿತು.
ಗುರುಪ್ರಸಾದ ಮಾತನಾಡಿ, ಮೇ 10 ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಶೇ.100 ರಷ್ಟು ಮತದಾನ ಆಗಬೇಕು. ಬೇರೆ ಊರುಗಳಿಗೆ ಹೋದವರು ಚುನಾವಣಾ ದಿನ ಗ್ರಾಮಕ್ಕೆ ಬಂದು ಮತದಾನ ಮಾಡಬೇಕು. ಮತದಾನಕ್ಕಾಗಿ ಚಿಕ್ಕರಾಂಪುರದಲ್ಲಿ ಮಾದರಿ ಮತಗಟ್ಟೆ ತೆರೆಯಲಾಗಿದೆ ಎಂದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ಕೃಷ್ಣಪ್ಪ ಕೆ ಮಾತನಾಡಿ, ಆನೆಗೊಂದಿ ಭಾಗ ಐತಿಹಾಸಿಕವಾಗಿ ಹೆಸರು ಮಾಡಿದೆ. ಚುನಾವಣೆಯಲ್ಲಿ ಶೇ.100 ರಷ್ಟು ಮತದಾನ ಮಾಡುವ ಮೂಲಕ ಹೆಸರು ಮಾಡಬೇಕು. ಹೀಗಾಗಿ, ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಯಾವುದೇ ಕಾರಣ ಹೇಳದೆ ಮತದಾನ ಪ್ರಕ್ರಿಯೆಯಿಂದ ದೂರ ಉಳಿಯಬಾರದು ಎಂದರು.
ಆನೆಗೊಂದಿ ಹಾಗೂ ಚಿಕ್ಕ ರಾಂಪುರ ಗ್ರಾಮದ ಜಾಗೃತಿ  ಜಾಥಾದಲ್ಲಿ ಮತದಾನ ಜಾಗೃತಿ ಗೀತೆಗಳನ್ನು ಹಾಕಿ ಅರಿವು ಮೂಡಿಸಲಾಯಿತು. ಈ ವೇಳೆ ಎಎಸ್ಐ ಎಸ್ ಬಿ ಹಿರೇಮಠ, ಹೆಡ್ ಕಾನ್ಸ್ ಟೆಬಲ್ ಗಳಾದ ರಾಜು ಅಕ್ಕಸಾಲಿಗರ್ , ಶಂಕರ್ ಗೌಡ ಪಾಟೀಲ್, ತಾ.ಪಂ. ಸ್ವೀಪ್ ಸಂಕಲನ ವಿಷಯ ನಿರ್ವಾಹಕರಾದ ಜುಬೇರ್ ಅಹ್ಮದ್ ನಾಯ್ಕ್ , ಐಇಸಿ ಸಂಯೋಜಕರಾದ ಬಾಳಪ್ಪ ತಾಳಕೇರಿ, ಗ್ರಾಪಂ ಕಾರ್ಯದರ್ಶಿಗಳಾದ ಹನುಮವ್ವ, ಸಿಬ್ಬಂದಿಗಳಾದ ರಾಘವೇಂದ್ರ, ಸತೀಶ ಇದ್ದರು.