ಮೇ 10ರವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ

ದೇವನಹಳ್ಳಿ,ಮೇ.೯-ಕರ್ನಾಟಕ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ ೨೦೨೩ರ ಸಂಬಂಧ ೨೦೨೩ರ ಮೇ ೧೦ ರಂದು ಮತದಾನವು ನಡೆಯಲಿರುವ ಹಿನ್ನೆಲೆ, ಮೇ ೦೮ರ ಸಂಜೆ ೬.೦೦ ಗಂಟೆಯಿಂದ ಮೇ ೧೦ ರಂದು ಮತದಾನ ಮತದಾನ ಮುಕ್ತಾಯವಾಗುವವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಾದ್ಯಂತ ದಂಡ ಪ್ರಕ್ರಿಯಾ ಸಂಹಿತೆ ೧೯೭೩ರ ಕಲಂ ೧೪೪ರಡಿ ಷರತ್ತಿಗೊಳಪಡಿಸಿ, ನಿಷೇಧಾಜ್ಞೆ ವಿಧಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆರ್.ಲತಾ ಅವರು ಆದೇಶಿಸಿದ್ದಾರೆ.
ಭಾರತ ಚುನಾವಣಾ ಆಯೋಗ ನಿಗದಿಪಡಿಸಿದ ಚುನಾವಣಾ ವೇಳಾಪಟ್ಟಿಯಂತೆ ದಿನಾಂಕ ೧೦.೦೫.೨೦೨೩ರಂದು ಮತದಾನವು ನಡೆಯಲಿದ್ದು, ಚುನಾವಣಾ ನೀತಿ ಸಂಹಿತೆಯು ದಿನಾಂಕ ೨೯.೦೩.೨೦೨೩ ರಿಂದ ೧೫.೦೫.೨೦೨೩ರವರೆಗೆ ಜಾರಿಯಲ್ಲಿರುತ್ತದೆ. ಈ ಸಮಯದಲ್ಲಿ ಮತದಾರರಿಗೆ ವಿವಿಧ ಆಸೆ-ಆಮೀಷಗಳಿಗೆ ಒಳಪಡಿಸುವುದು, ಬೆದರಿಸಲು ಯತ್ನಿಸುವುದು, ತಮ್ಮ ಪರವಾಗಿ ವರ್ತಿಸಲು ಪುಸಲಾಯಿಸುವುದು, ಮತಗಟ್ಟೆಗಳ ಹತ್ತಿರದಲ್ಲಿ ಪ್ರಚಾರ ಮಾಡುವುದು, ಸಾರ್ವಜನಿಕ ಸಭೆ ನಡೆಸುವುದು, ಮತದಾರರನ್ನು ವಿವಿಧ ಸಾರಿಗೆ ವ್ಯವಸ್ಥೆಗಳ ಮೂಲಕ ಮತಗಟ್ಟೆಗಳಿಗೆ ಕರೆತರುವುದು, ಶಾಂತಿಭಂಗ ಉಂಟುಮಾಡುವುದು, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವುದು ಹಾಗೂ ಇತರ ಅಹಿತಕರ ಘಟನೆಗಳು ನಡೆಯುವಂತೆ ಮಾಡುವ ಸಂಭವನೀಯತೆಗಳಿದ್ದು, ಇದನ್ನು ತಡೆಗಟ್ಟುವ ಹಾಗೂ ಮತದಾನ ಪಾವಿತ್ರ್ಯತೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಾದ ೧೭೮-ಹೊಸಕೋಟೆ, ೧೭೯-ದೇವನಹಳ್ಳಿ, ೧೮೦-ದೊಡ್ಡಬಳ್ಳಾಪುರ ಹಾಗೂ ೧೮೧-ನೆಲಮಂಗಲ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ದಂಡ ಪ್ರಕ್ರಿಯಾ ಸಂಹಿತೆ ೧೯೭೩ರ ಕಲಂ ೧೪ರಡಿ ಪ್ರತಿಬಂಧಕಾಜ್ಞೆ ವಿಧಿಸಿ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆ.
ಷರತ್ತುಗಳು:
೧. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೇ ೦೮ ರಂದು ಸಂಜೆ ೬.೦೦ ಗಂಟೆಯಿಂದ ಮೇ ೧೦ ರಂದು ಮತದಾನ ಮತದಾನ ಮುಕ್ತಾಯವಾಗುವವರೆಗೆ ಈ ಅವಧಿಯಲ್ಲಿ ಸಾರ್ವಜನಿಕರು ಸಕಾರಣವಿಲ್ಲದೇ ಐದು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕ ರಸ್ತೆ, ಬೀದಿ, ಓಣಿ, ಕೇರಿಗಳಲ್ಲಿ, ಸಾರ್ವಜನಿಕ ಸ್ಥಳ, ಸಾರ್ವಜನಿಕ ಕಟ್ಟಡ ಮತ್ತು ಮತದಾನ ಕೇಂದ್ರದ ಸುತ್ತ-ಮುತ್ತ ಮುಂತಾದವುಗಳಲ್ಲಿ ಗುಂಪು ಸೇರುವುದನ್ನು ಅಥವಾ ಗುಂಪು ಸೇರುವುದನ್ನು ನಿಷೇಧಿಸಿದೆ.
೨. ಚುನಾವಣಾ ಅಭ್ಯರ್ಥಿ ಬೆಂಬಲಿಗರು ಸೇರಿ ೦೫ ಜನರಿಗಿಂತ ಹೆಚ್ಚಿನ ಸಂಖ್ಯೆಯ ಜನರು ಸೇರತಕ್ಕದ್ದಲ್ಲ.
೩. ಯಾವುದೇ ಆಯುಧ, ಕುಡುಗೋಲು, ಖಡ್ಗ, ಭರ್ಜಿ, ಚೂರಿ, ದೊಣ್ಣೆ, ಲಾಠಿ ಅಥವಾ ದೈಹಿಕ ದಂಡನೆಗೆ ಕಾರಣವಾಗುವ ಅಥವಾ ಪೂರಕವಾಗುವ ಇನ್ಯಾವುದೇ ವಸ್ತುಗಳನ್ನು ಹೊಂದುವುದನ್ನು ಮತ್ತು ಸಾಗಾಟ ಮಾಡುವುದನ್ನು ನಿಷೇಧಿಸಿದೆ.
೪. ಮತಗಟ್ಟೆಗಳು, ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಜರಾಕ್ಸ್ ಅಂಗಡಿ, ಬುಕ್ ಸ್ಟಾಲ್, ಸೈಬರ್ ಕೆಫೆಗಳನ್ನು ನಿರ್ಬಂಧಿಸಿದೆ.
೫. ಮತದಾನ ದಿನದಂದು ಮತಗಟ್ಟೆಗಳ ೧೦೦ ಮೀಟರ್ ಒಳಗೆ ಚುನಾವಣೆ ಪ್ರಚಾರ ನಿಷೇಧಿಸಿದೆ ಹಾಗೂ ಪ್ರಚಾರಕ್ಕೆ ಸಂಬಂಧಿಸಿದ ಪೋಸ್ಟರ್ / ಬ್ಯಾನರ್ ಅಥವಾ ಇನ್ಯಾವುದೇ ವಸ್ತುಗಳನ್ನು ಬಳಸುವ೦ತಿಲ್ಲ.
೬. ಕಲ್ಲುಗಳು, ಖಾರ ಪದಾರ್ಥ , ಇಲ್ಲವೆ ಸ್ಫೋಟಕ ವಸ್ತುಗಳು, ಯಾವುದೇ ದಾಹಕ ವಸ್ತುಗಳು ಇತ್ಯಾದಿಗಳನ್ನು ಮತದಾನ ನಡೆಯುವ ಸ್ಥಳಕ್ಕೆ ತೆಗೆದುಕೊಂಡು ಹೋಗುವುದನ್ನು ಹಾಗೂ ಶೇಖರಿಸುವುದನ್ನು ನಿಷೇಧಿಸಲಾಗಿದೆ.
೭. ಕಲ್ಲುಗಳನ್ನು ಮತ್ತು ಎಸೆಯುವಂತಹ ವಸ್ತುಗಳನ್ನು, ಸಾಧನಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.
೮. ಯಾವುದೇ ರೀತಿಯ ಬಂದ್, ಪ್ರತಿಭಟನೆ, ಮುಷ್ಕರ, ಪ್ರತಿಕೃತಿ ದಹನ, ಪ್ರದರ್ಶನ, ಪೂರಕ ಚಟುವಟಿಕೆಗಳು, ಯಾವುದೇ ಖಾಸಗಿ / ಸಾರ್ವಜನಿಕ ಆಸ್ತಿ ಪಾಸ್ತಿಗಳನ್ನು ಹಾನಿಗೊಳಿಸುವ ಹಾಗೂ ವಿರೂಪಗೊಳಿಸುವ ಎಲ್ಲಾ ರೀತಿಯ ಚಟುವಟಿಕೆಗಳನ್ನು ನಿಷೇಧಿಸಿದೆ.