ಮೇ 1 ರಿಂದ ಲಸಿಕೆ : ಇಂದಿನಿಂದ ನೊಂದಣಿ ಆರಂಭ

ನವದೆಹಲಿ, ಏ.೨೮- ದೇಶದಲ್ಲಿ ಹಲವು ರಾಜ್ಯಗಳಲ್ಲಿ ಕೊರೋನಾ ಲಸಿಕೆ ಕೊರತೆಯ ನಡುವೆಯೂ ಮೇ.ತಿಂಗಳ ೧ರಿಂದ ೧೮ ವರ್ಷ ದಾಟಿದ ಎಲ್ಲರಿಗೂ ಲಸಿಕೆ ಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು ಲಸಿಕೆ ಪಡೆಯಲು ಇಂದಿನಿಂದ ನೋಂದಣಿ ಕಾರ್ಯ ಆರಂಭವಾಗಿದೆ.

ಇಂದು ಸಂಜೆ ೪ ಗಂಟೆಯಿಂದ ದೇಶಾದ್ಯಂತ ಲಸಿಕೆ ಪಡೆಯಲು ನೋಂದಣಿ ಕಾರ್ಯ ಕೋವಿನ್.ಗೋ.ಇನ್, ಆರೋಗ್ಯ ಸೇತು, ಉಮಾಂಗ್ ಆಪ್ ನಲ್ಲಿ ಆರಂಭವಾಗಲಿದೆ. ೧೮ ವರ್ಷ ದಾಟಿದ ಎಲ್ಲರೂ ನೋಂದಣಿ ಮಾಡಿಕೊಂಡು ಲಸಿಕೆ ಪಡೆಯುವಂತೆ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಛತ್ತೀಸ್ ಘಡ, ಜಾರ್ಖಂಡ್ ,ಪಂಜಾಬ್ ,ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ಲಸಿಕೆ ಕೊರತೆ ಕಾರಣ ಮುಂದಿಟ್ಟು ಮೇ ೧ರಿಂದ ಲಸಿಕೆ ಹಾಕಲು ಸಾಧ್ಯವಿಲ್ಲ ಎಂದು ಈಗಾಗಲೇ ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದು ಇನ್ನು ಹಲವು ರಾಜ್ಯಗಳು ನಿಗಧಿಯಂತೆ ಲಸಿಕೆ ಹಾಕುವ ಕಾರ್ಯ ಆರಂಭಿಸಲಿವೆ.

ಈ ನಡುವೆ ದೇಶದ ಹಲವು ರಾಜ್ಯಗಳಲ್ಲಿ ಲಸಿಕೆಯ ಕೊರತೆ ಇದೆ ಎನ್ನುವುದನ್ನು ಕೇಂದ್ರ ಸರ್ಕಾರ ಅಲ್ಲ ಗಳೆದಿದ್ದು ನಿಗದಿಯಂತೆ ಮೇ ೧ ರಿಂದ ಹಲವು ರಾಜ್ಯಗಳಲ್ಲಿ ಲಸಿಕೆ ಹಾಕುವ ಕಾರ್ಯ ನಡೆಯಲಿದೆ ಎಂದು ಸ್ಪಷ್ಟಪಡಿಸಿದೆ.

೧೮ ವರ್ಷ ದಾಟಿದ ಎಲ್ಲರಿಗೂ ಲಸಿಕೆ ಹಾಕಲು ಅಗತ್ಯ ಪ್ರಮಾಣದಲ್ಲಿ ಲಸಿಕೆ ಲಭ್ಯವಿಲ್ಲ. ಹೀಗಾಗಿ ಮೇ ೧ ರಿಂದ ಲಸಿಕೆ ಹಾಕಲು ಸಾಧ್ಯವಿಲ್ಲ ಎಂದು ಛತ್ತಿಸ್ಗಢ, ಜಾರ್ಖಂಡ್ ,ಪಂಜಾಬ್, ರಾಜಸ್ಥಾನ ಈಗಾಗಲೇ ಸ್ಪಷ್ಟಪಡಿಸಿವೆ. ಇನ್ನುಳಿದಂತೆ ಕರ್ನಾಟಕ, ಕೇರಳ, ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ, ತಮಿಳುನಾಡು, ಸೇರಿದಂತೆ ಮತ್ತಿತರ ರಾಜ್ಯಗಳು ನಿರ್ಧರಿಸಿವೆ.

ಅಗತ್ಯ ಪ್ರಮಾಣದಲ್ಲಿ ಲಸಿಕೆಯ ಪೂರೈಕೆ ಮಾಡುವಂತೆ ಭಾರತೀಯ ಸೆರಂ ಸಂಸ್ಥೆ ಮತ್ತು ಭಾರತ್ ಭಯೋಟೆಕ್ ಸಂಸ್ಥೆಗೆ ಸೂಚನೆ ನೀಡುವಂತೆ ಹಲವು ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿವೆ.

ಈ ನಡುವೆ ಪಂಜಾಬ್ ಆರೋಗ್ಯ ಸಚಿವ ಬಲಬೀರ್ ಸಿಂಗ್ ಸಿಧು ಮಾತನಾಡಿ ,ಸದ್ಯ ಎರಡುವರೆ ಲಕ್ಷ ಲಸಿಕೆ ರಾಜ್ಯದಲ್ಲಿದೆ. ೧೮ ವರ್ಷ ದಾಟಿದ ಎಲ್ಲರಿಗೂ ಲಸಿಕೆ ಹಾಕಲು ಸಾಧ್ಯವಿಲ್ಲ. ಪ್ರತಿದಿನ ೯೦,೦೦೦ ಲಸಿಕೆ ಅಗತ್ಯವಿದೆ.ಹೀಗಾಗಿ ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಪೂರೈಕೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಅವರು ಒತ್ತಾಯಿಸಿದ್ದಾರೆ.

ತಮಿಳುನಾಡಿನಲ್ಲೂ ಕೂಡ ಲಸಿಕೆಯ ಕೊರತೆ ಎದುರಾಗಿದೆ .ಆಗಿದ್ದರೂ ಲಭ್ಯವಿರುವ ಲಸಿಕೆಯನ್ನು ಜನರಿಗೆ ಹಾಕಲು ನಿರ್ಧರಿಸಿದೆ. ಸದ್ಯ ಇರುವ ಲಸಿಕೆ ಪೂರ್ಣಗೊಳ್ಳುವ ಮುಂಚೆ ಲಸಿಕೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.

ಕೇರಳದ ತಿರುವನಂತಪುರಂ ನಲ್ಲಿ ಲಸಿಕೆ ಪಡೆಯಲು ನೊಂದಣಿ ಕಾರ್ಯದಲ್ಲಿ ಸರತಿಸಾಲಿನಲ್ಲಿ ನಿಂತಿದ್ದ ಮೂರು ಮಂದಿ ಕುಸಿದು ಬಿದ್ದ ಘಟನೆ ನಡೆದಿದ್ದು ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ

ಕೊರತೆ ಇಲ್ಲ

ದೇಶದಲ್ಲಿ ಕೋರೊನಾ ಸೋಂಕಿಗೆ ಲಸಿಕೆ ಹಾಕಲು ಲಸಿಕೆ ಕೊರತೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಇದುವರೆಗೂ ಕೇಂದ್ರದಿಂದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸರಿಸುಮಾರು ೧೫ ಕೋಟಿಗೂ ಹೆಚ್ಚು ಲಸಿಕೆಯನ್ನು ಕಳುಹಿಸಿಕೊಡಲಾಗಿದೆ ಮುಂದಿನ ಎರಡು ಮೂರು ದಿನಗಳಲ್ಲಿ ಇನ್ನೂ ಹೆಚ್ಚುವರಿಯಾಗಿ ೮೦ ಲಕ್ಷ ಲಸಿಕೆಯನ್ನು ಪೂರೈಕೆ ಮಾಡಲಾಗುವುದು ಎಂದು ತಿಳಿಸಿದೆ