ಮೇ ೨ ಪಶ್ಚಿಮ ಬಂಗಾಳಕ್ಕೆ ಅಚ್ಚೇದಿನ ಪ್ರಧಾನಿ

ಕೋಲ್ಕತ್ತಾ, ಮಾ. ೨೪- ಪ್ರಚಾರಕ್ಕೆ ತೆರಳಿದ ಎಲ್ಲೆಡೆ ಜನ ಸಾಗರ ನೋಡುತ್ತಿದ್ದೇನೆ. ಇದು ಪಶ್ಚಿಮಬಂಗಾಳದ ಅಸಲಿ ಪರಿವರ್ತನೆಯ ಪ್ರತೀಕ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಮೇ ತಿಂಗಳ ೨ರಂದು ಪಶ್ಚಿಮಬಂಗಾಳದಲ್ಲಿ ನಿಜವಾದ ಪರಿವರ್ತನೆಯ ಯುಗ ಆರಂಭವಾಗಲಿದೆ ಎಂದು ಅವರು ಹೇಳಿದ್ದಾರೆ.
ಪಶ್ಚಿಮಬಂಗಾಳ ವಿಧಾನಸಭೆಗೆ ಇದೇ ತಿಂಗಳ ೨೭ ರಂದು ಮೊದಲ ಹಂತದ ಚುನಾವಣೆ ನಡೆಯಲಿದ್ದು ಚುನಾವಣಾ ಕಣ ರಂಗೇರಿದೆ.
ಹಿನ್ನೆಲೆಯಲ್ಲಿ ಪೂರ್ವ ಮೆಡಿನಾ ಪುರ ಜಿಲ್ಲೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಪಶ್ಚಿಮ ಬಂಗಾಳಕ್ಕೆ ನಿಜವಾದ ಅಚ್ಚೇದಿನ ಶೀಘ್ರದಲ್ಲೇ ಬರಲಿದೆ ಎಂದು ಅವರು ಹೇಳಿದ್ದಾರೆ.
ಪಶ್ಚಿಮ ಬಂಗಾಳದ ವಿವಿಧ ಕಡೆ ಪ್ರಚಾರಕ್ಕೆ ತೆರಳಿದ ಸಮಯದಲ್ಲಿ ಎಲ್ಲೆಡೆ ಜನರಿಂದ ಅಭೂತಪೂರ್ವ ಜನಬೆಂಬಲ ವ್ಯಕ್ತವಾಗುತ್ತದೆ ಇದನ್ನು ನೋಡಿದರೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರಕಾರದ ವಿರುದ್ಧ ಜನರ ಆಕ್ರೋಶ ವ್ಯಕ್ತವಾಗುತ್ತಿದೆ. ಮೇ ಎರಡರಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಧಿಕಾರದಿಂದ ನಿರ್ವಹಿಸಲಿದ್ದು ಬಿಜೆಪಿ ಆಡಳಿತಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅಭಿವೃದ್ಧಿಯ ಕಡೆಗೆ ಆದ್ಯತೆ ನೀಡಿಲ್ಲ. ಕಳೆದ ಚುನಾವಣೆ ಸಮಯದಲ್ಲಿ ನೀಡಿದ ಯಾವುದೆ ಭರವಸೆಯನ್ನು ಈಡೇರಿಲ್ಲ ಈ ಮೂಲಕ ಜನರಿಗೆ ಮಂಕುಬೂದಿ ಎರಚುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಭ್ರಷ್ಟಾಚಾರ ರಹಿತ ಆಡಳಿತ:
ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡಲಾಗುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ಕೇಂದ್ರ ಮತ್ತು ರಾಜ್ಯದ ಯೋಜನೆಗಳು ನೇರವಾಗಿ ಜನರಿಗೆ ತಲುಪುವಂತೆ ಮಾಡಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ಕಲ್ಯಾಣಕ್ಕೆ ಹೆಚ್ಚು ಒತ್ತು ನೀಡುವ ಜೊತೆಗೆ ಕೇಂದ್ರ ಸರ್ಕಾರದಿಂದ ಮಹಿಳಾ ಅಭಿವೃದ್ಧಿಗೆ ಸಾಕಷ್ಟು ಅನುದಾನ ಮತ್ತು ನೆರವು ನೀಡಲಾಗುವುದು ಎಂದು ಅವರು ಹೇಳಿದರು.
ಈಗಾಗಲೇ ಬಿಡುಗಡೆಯಾಗಿರುವ ಬಿಜೆಪಿ ಪಕ್ಷದ ಪ್ರಣಾಳಿಕೆಯಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವ ಜೊತೆಗೆ ಭ್ರಷ್ಟಾಚಾರ ಮುಕ್ತ ಆಡಳಿತ ಮಹಿಳೆಯರ ರಕ್ಷಣೆಗೆ ಒತ್ತು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ