ಮೇ ೧ ಟಗರು ಖ್ಯಾತಿಯಮಾನ್ವಿತಾ ವಿವಾಹ

ಬೆಂಗಳೂರು,ಏ.೧೩- ಕೆಂಡಸಂಪಿಗೆ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಹೆಜ್ಜೆ ಇಟ್ಟ ಟಗರು ಪುಟ್ಟಿ ನಟಿ ಮಾನ್ವಿತಾ ಕಾಮತ್ ಹೊಸ ಇನ್ಸಿಂಗ್ಸ್ ಆರಂಭಿಸಲು ಮುಂದಾಗಿದ್ದಾರೆ.
ಮೈಸೂರು ಮೂಲದ ಸಂಗೀತ ನಿರ್ದೇಶಕ ಅರುಣ್ ಕುಮಾರ್ ಅವರೊಂದಿಗೆ ನಟಿ ಮಾನ್ವಿತಾ ಕಾಮತ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮೇ ೧ ರಂದು ಮಾನ್ವಿತಾ ಅರುಣ್ ಕುಮಾರ್ ವಿವಾಹೋತ್ಸವ ನಡೆಯಲಿದೆ.
ಮಾನ್ವಿತಾ ಕಾಮತ್ ಹಾಗೂ ಅರುಣ್ ಕುಮಾರ್ ಕೊಂಕಣಿ ಸಂಪ್ರದಾಯದಂತೆ ಮೇ೧ ಕ್ಕೆ ಹೊಸ ಬಾಳಿಗೆ ಹೆಜ್ಜೆ ಇಡಲಿದ್ದಾರೆ. ಅದಕ್ಕೂ ಮುನ್ನ ಏಪ್ರಿಲ್ ೨೯ಕ್ಕೆ ಮೆಹಂದಿ ಕಾರ್ಯಕ್ರಮ, ಏಪ್ರಿಲ್ ೩೦ ಅರಿಶಿನ ಶಾಸ್ತ್ರ ಜರುಗಿದರೆ, ಏಪ್ರಿಲ್ ೩೦ರಂದು ಸಂಗೀತ್ ಕಾರ್ಯಕ್ರಮ ನಡೆಯಲಿದೆ. ಚಿಕ್ಕಮಗಳೂರಿನ ಕಳಸದಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆ ನಡೆಯಲಿದೆ.
ಆರ್ ಜೆಯಾಗಿದ್ದ ಮಾನ್ವಿತಾ ಸೂರಿ ನಿರ್ದೇಶನದ ಕೆಂಡಸಂಪಿಗೆ ಚಿತ್ರದಲ್ಲಿ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಬಳಿಕ ಶಿವಣ್ಣನ ಟಗರು ಸಿನಿಮಾದಲ್ಲಿ ಬಣ್ಣ ಹಚ್ಚಿ ಟಗರು ಪುಟ್ಟಿಯಾಗಿ ಕರುನಾಡ ಪ್ರೇಕ್ಷಕರ ಮನ ಗೆದ್ದ ಈ ಸುಂದರಿ ಈಗ ಹಸೆಮಣೆ ಏರಲು ಅಣಿಯಾಗಿದ್ದಾರೆ.
ವೈಯಕ್ತಿಕ ಜೀವನದಲ್ಲಿ ಆದ ಏರುಪೇರಿನಿಂದ ಹಲವು ವರ್ಷಗಳ ಕಾಲ ಚಿತ್ರರಂಗ ತೊರೆದಿದ್ದ ನಟಿ ಮಾನ್ವಿತಾ ಕಾಮತ್, ಅಪ್ಪ ಐ ಲವ್ ಯೂ ಚಿತ್ರದ ಮೂಲಕ ಮತ್ತೆ ಚಿತ್ರರಂಗ ಪ್ರವೇಶಿಸಿದ್ದರು. ಇದರ ಬೆನ್ನಲ್ಲೇ ಹೊಸ ಜೀವನ ಆರಂಭಿಸಲು ಮುಂದಾಗಿದ್ದಾರೆ.ಮದುವೆಯಲ್ಲಿ ಚಿತ್ರರಂಗದ ಅನೇಕ ನಟ, ನಟಿಯರು ಭಾಗಿಯಾಗುವ ಸಾಧ್ಯತೆಗಳಿವೆ.