ಮೇ ೧೯ ಮೂರು ದೇಶಗಳಿಗೆ ಮೋದಿ ಪ್ರವಾಸ

ನವದೆಹಲಿ,ಮೇ.೧೭- ಪ್ರಧಾನಿ ನರೇಂದ್ರ ಮೋದಿ ಅವರು ಮೂರು ದೇಶಗಳಾದ ಜಪಾನ್, ಪಪುವಾ ನ್ಯೂಗಿನಿಯಾ, ಆಸ್ಟ್ರೇಲಿಯಾಕ್ಕೆ ಇದೇ ತಿಂಗಳ ೧೯ ರಿಂದ ೨೪ ರವರೆಗೆ ಪ್ರವಾಸ ಕೈಗೊಳ್ಳಲಿದ್ದಾರೆ.ಗ್ರೂಪ್ ಆಫ್ ಸೆವೆನ್ ಜಿ – ೭ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕ್ವಾಡ್ ಸೇರಿದಂತೆ ಮೂರು ಪ್ರಮುಖ ಬಹುಪಕ್ಷೀಯ ಶೃಂಗಸಭೆಗಳಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್, ಪಪುವಾ ನ್ಯೂಗಿನಿಯಾ ಮತ್ತು ಆಸ್ಟ್ರೇಲಿಯಾಕ್ಕೆ ಆರು ದಿನಗಳ ಪ್ರವಾಸವನ್ನು ಕೈಗೊಳ್ಳಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.ಜಪಾನ್ ಅಧ್ಯಕ್ಷ ಕಿಶಿದಾ ಅವರ ಆಹ್ವಾನದ ಮೇರೆಗೆ ಪ್ರಧಾನಿ ಆ ದೇಶಕ್ಕೆ ಪ್ರಯಾಣಿಸುತ್ತಿದ್ದಾರೆ ತಮ್ಮ ಪ್ರವಾಸದ ಮೊದಲ ಹಂತದಲ್ಲಿ, ಪ್ರಧಾನಿ ಅವರು ಮೇ ೧೯ ರಿಂದ ೨೧ ರವರೆಗೆ ಜಪಾನಿನ ನಗರವಾದ ಹಿರೋಷಿಮಾಕ್ಕೆ ಭೇಟಿ ನೀಡಲಿದ್ದು, ಜಿ.-೭ ಮುಂದುವರಿದ ಆರ್ಥಿಕತೆಗಳ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದೆ.ಈ ಸಭೆಯಲ್ಲಿ ಆಹಾರ, ರಸಗೊಬ್ಬರ ಮತ್ತು ಇಂಧನ ಭದ್ರತೆ ಸೇರಿದಂತೆ ಜಾಗತಿಕವಾಗಿ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾತನಾಡುವ ನಿರೀಕ್ಷೆಯಿದೆ ಎಂದು ತಿಳಿಸಿದೆ.ಜಪಾನ್‌ನಿಂದ, ಪ್ರಧಾನಿ ಮೋದಿ ಅವರು ಪಪುವಾ ನ್ಯೂಗಿನಿಯಾದ ಪೋರ್ಟ್ ಮೊರೆಸ್‌ಬಿಗೆ ಪ್ರಯಾಣಿಸಲಿದ್ದಾರೆ, ಅಲ್ಲಿ ಅವರು ಮೇ ೨೨ ರಂದು ಪ್ರಧಾನಿರೊಂದಿಗೆ ಜಂಟಿಯಾಗಿ ಭಾರತ-ಪೆಸಿಫಿಕ್ ದ್ವೀಪಗಳ ಸಹಕಾರಕ್ಕಾಗಿ ಮೂರನೇ ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ.ಪ್ರವಾಸದ ಮೂರನೇ ಮತ್ತು ಅಂತಿಮ ಹಂತದಲ್ಲಿ, ಕ್ವಾಡ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮೋದಿ ಅವರು ಮೇ ೨೨ ರಿಂದ ೨೪ ರವರೆಗೆ ಸಿಡ್ನಿಗೆ ಭೇಟಿ ನೀಡಲಿದ್ದಾರೆ.”ಶೃಂಗಸಭೆಯ ಸಮಯದಲ್ಲಿ, ಪ್ರಧಾನ ಮಂತ್ರಿಗಳು ಪಾಲುದಾರ ದೇಶಗಳೊಂದಿಗೆ ಜಿ-೭ ಅಧಿವೇಶನಗಳಲ್ಲಿ ಮಾತನಾಡಲಿದ್ದಾರೆ. ಅದರಲ್ಲಿಯೂ ಸುಸ್ಥಿರ ಗ್ರಹದ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿ; ಆಹಾರ, ರಸಗೊಬ್ಬರ ಮತ್ತು ಇಂಧನ ಭದ್ರತೆ; ಆರೋಗ್ಯ; ಲಿಂಗ ಸಮಾನತೆ; ಹವಾಮಾನ ಬದಲಾವಣೆ ಮತ್ತು ಪರಿಸರ; ಚೇತರಿಸಿಕೊಳ್ಳುವ ಮೂಲಸೌಕರ್ಯ ; ಮತ್ತು ಅಭಿವೃದ್ಧಿ ಸಹಕಾರ ಕುರಿತಂತೆ ಚರ್ಚೆ ನಡೆಯಲಿದೆ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.ಪ್ರಧಾನಮಂತ್ರಿ ಅವರು ಆಸ್ಟ್ರೇಲಿಯಾದ ಸಿಇಒಗಳು ಮತ್ತು ವ್ಯಾಪಾರ ಮುಖಂಡರೊಂದಿಗೆ ಸಂವಾದ ನಡೆಸಲಿದ್ದಾರೆ ಮತ್ತು ಮೇ ೨೩ ರಂದು ಸಿಡ್ನಿಯಲ್ಲಿ ಸಮುದಾಯ ಕಾರ್ಯಕ್ರಮದಲ್ಲಿ ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ