ಮೇ.೧೦: ಮತದಾರರು ಕಡ್ಡಾಯ ಮತದಾನ ಮಾಡಿ

ರಾಯಚೂರು,ಏ.೩೦- ಮುಂದಿನ ತಿಂಗಳ ನಡೆಯಲಿರುವ ವಿಧಾನಸಭೆ ಚುನಾವಣೆ ಮತದಾನದಲ್ಲಿ ಮತದಾರರು ಯಾವುದೇ ಆಸೆ ಅಮೀಷಗಳಿಗೆ ಒಳಗಾಗಿದೆ ಕಡ್ಡಾಯ ಮತದಾನ ಮಾಡಬೇಕೆಂದು ಚಾಗಬಾವಿ ಗ್ರಾ.ಪಂ ಪಿಡಿಒ ಪ್ರಸಾದ್ ತಿಳಿಸಿದರು.
ಅವರು ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಚಾಗಬಾವಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಲಕ್ಕಂದಿನ್ನಿ ಗ್ರಾಮದಲ್ಲಿ ನರೇಗಾ ಕೂಲಿಕಾರರಿಗೆ ಮತದಾನ ಕುರಿತು ಜಾಗೃತಿ ಮೂಡಿಸಿ ಮಾತನಾಡಿದರು.
ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಪ್ರತಿಯೊಬ್ಬರು ಮೇ ೧೦ ರಂದು ಮತಗಟ್ಟೆ ಕೇಂದ್ರಕ್ಕೆ ಆಗಮಿಸಿ ಮತ ಚಲಾಯಿಸುವಂತೆ ತಿಳಿಸಿದರು. ಪ್ರಜಾಪ್ರಭುತ್ವ ಗೆಲ್ಲಿಸಬೇಕು. ಮತದಾನ ದೇಶದ ಉತ್ತಮ ಭವಿಷ್ಯಕ್ಕೆ ಬುನಾದಿ. ಮತದಾನ ಮಾಡುವ ಮೂಲಕ ಆ ಬುನಾದಿಯನ್ನು ಸದೃಢಗೊಳಿಸಿ ಎಂದರು. ೧೮ ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಪ್ರಜೆಯು ಕಡ್ಡಾಯವಾಗಿ ಮತದಾನ ಮಾಡಬೇಕು. ವಿಶೇಷ ಚೇತನರು, ಹಿರಿಯ ನಾಗರಿಕರು ಮತದಾನ ಮಾಡುವಂತೆ ಕರೆ ನೀಡಿದರು.
ಈ ವರ್ಷ ಚುನಾವಣಾ ಆಯೋಗವು ಮನೆಯಲ್ಲಿಯೇ ಇದ್ದು ಮತದಾನ ಮಾಡುವ ಅವಕಾಶವನ್ನು ವಿಶೇಷ ಚೇತನರಿಗೆ ಹಾಗೂ ೮೦ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಕಲ್ಪಿಸಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು.
ಏಪ್ರಿಲ್ ೧ ರಿಂದ ನರೇಗಾ ಕೂಲಿ ಮೊತ್ತವು ೩೦೯ ರಿಂದ ೩೧೬ ಕ್ಕೆ ಹೆಚ್ಚಿಸಲಾಗಿದೆ. ಯೋಜನೆಯಡಿ ಸಿಗುವ ವೈಯಕ್ತಿಕ ಕಾಮಗಾರಿಗಳ ಸೌಲಭ್ಯಗಳನ್ನು ಪಡೆಯಲು ಮಾಹಿತಿ ತಿಳಿಸಲಾಯಿತು. ಐಇಸಿ ಸಂಯೋಜಕರು ರಾಜೇಂದ್ರ ಕುಮಾರ ರವರು ಮತದಾನ ಕುರಿತು ಪ್ರತಿಜ್ಞೆ ವಿಧಿ ಬೋಧನೆ ಮಾಡಿದರು.
ತಾಂತ್ರಿಕ ಸಹಾಯಕ ಸಮೀರ್, ಜಿಕೆಎಂ ಶಿವಲೀಲಾ, ಬಿಎಫ್ಟಿ ವೀರೇಶ, ಮೇಟ್, ಕೂಲಿಕಾರರು ಇದ್ದರು.