ಮೇ ೧೦ ಮತದಾನ, ಮೇ ೧೩ ಫಲಿತಾಂಶ

ಬೆಂಗಳೂರು,ಮಾ.೨೯:ರಾಜ್ಯ ವಿಧಾನಸಭೆಗೆ ಮೇ ತಿಂಗಳ ೧೦ ರಂದು ಚುನಾವಣೆ ನಡೆಯಲಿದ್ದು, ಫಲಿತಾಂಶ ಮೇ ೧೩ ರಂದು ಪ್ರಕಟವಾಗಲಿದೆ. ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಎಲ್ಲ ೨೨೪ ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿವೆ.
ನವದೆಹಲಿಯಲ್ಲಿಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್‌ಕುಮಾರ್, ಕರ್ನಾಟಕ ವಿಧಾನಭಾ ಚುನಾವಣೆಯು ಮೇ ತಿಂಗಳ ೧೦ ಬುಧವಾರದಂದು ನಡೆಯಲಿದೆ ಎಂದು ಪ್ರಕಟಿಸಿ. ಫಲಿತಾಂಶ ಮೇ ೧೩ ಶನಿವಾರದಂದು ಪ್ರಕಟವಾಗಲಿದೆ. ಇಂದಿನಿಂದಲೇ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ ಎಂದರು.
ಏ. ೧೩ ರಿಂದ ನಾಮಪತ್ರ ಸಲ್ಲಿಕೆ
ಚುನಾವಣೆಗೆ ಏಪ್ರಿಲ್ ೧೩ ರಂದು ಅಧಿಸೂಚನೆ ಹೊರ ಬೀಳಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಏಪ್ರಿಲ್ ೨೦ ನಾಮಪತ್ರ ಸಲ್ಲಿಸಲು ಕಡೆಯ ದಿನ. ನಾಮಪತ್ರಗಳ ಪರಿಶೀಲನೆ ಏ. ೨೧ ರಂದು ನಡೆಯಲಿದ್ದು, ಏ. ೨೪ ನಾಮಪತ್ರ ವಾಪಸ್ ಪಡೆಯಲು ಕಡೆಯ ದಿನವಾಗಿದೆ ಎಂದು ಅವರು ಮಾಹಿತಿ ನೀಡಿದರು.
೨೨೪ ಸದಸ್ಯ ಬಲದ ಕರ್ನಾಟಕ ವಿಧಾನಸಭೆಯ ಅವಧಿ ಮೇ ತಿಂಗಳ ೨೪ಕ್ಕೆ ಕೊನೆಗೊಳ್ಳಲಿದ್ದು, ಅದಕ್ಕೂ ಮುನ್ನವೇ ಚುನಾವಣೆಗಳು ನಡೆದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಬೇಕಿದೆ. ಅದರಂತೆ ಇಂದು ಚುನಾವಣಾ ಆಯೋಗ ಚುನಾವಣಾ ದಿನಾಂಕಗಳನ್ನು ಪ್ರಕಟಿಸಿದೆ.
ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗೆ ಕ್ರಮ
ರಾಜ್ಯದ ವಿಧಾನಸಭಾ ಚುನಾವಣೆಗೆ ಕಳೆದ ಬಾರಿಯಂತೆ ಈ ಬಾರಿಯೂ ಒಂದೇ ಹಂತದಲ್ಲಿ ಚುನಾವಣೆಗಳು ನಡೆಯಲಿವೆ.
ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಮತದಾನಕ್ಕೆ ಆಯೋಗ ಎಲ್ಲ ಸಿದ್ಧತೆ ನಡೆಸಿದೆ.ಚುನಾವಣಾ ನೀತಿ ಸಂಹಿತೆ ಇಂದಿನಿಂದ ಜಾರಿಯಾಗಿದ್ದು, ಸರ್ಕಾರ ಯಾವುದೇ ಘೋಷಣೆಗಳನ್ನು ಮಾಡುವಂತಿಲ್ಲ. ಹಾಗೆಯೇ ರಾಜಕೀಯ ಪಕ್ಷಗಳೂ ಸಹ ಚುನಾವಣಾ ನೀತಿ ಸಂಹಿತೆ ಅಡಿಯಲ್ಲೇ ಕಾಂiiಕ್ರಮ ನಡೆಸಬೇಕಿದೆ ಎಂದರು.ರಾಜ್ಯದಲ್ಲಿ ಒಟ್ಟು ೫.೨೧ ಕೋಟಿ ಮತದಾರರಿದ್ದು, ಇವರಲ್ಲಿ ೨.೬೨ ಕೋಟಿ ಪುರುಷರು, ಹಾಗೆ ೨.೫೯ ಕೋಟಿ ಮಹಿಳಾ ಮತದಾರರಿದ್ದು, ೪,೬೯೯ ತೃತೀಯ ಲಿಂಗಿ ಮತದಾರರಿದ್ದಾರೆ.
ಚುನಾವಣೆಗಾಗಿ ೫೮,೨೮೨ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದ್ದು, ಇದರಲ್ಲಿ ೧೨ ಸಾವಿರ ಮತಗಟ್ಟೆಗಳು ಸೂಕ್ಷ್ಮ ಮತಗಟ್ಟೆಗಳಾಗಿವೆ. ನಗರ ಪ್ರದೇಶದಲ್ಲಿ ೨೪,೦೬೩ ಮತಗಟ್ಟೆಗಳು, ಗ್ರಾಮೀಣ ಭಾಗದಲ್ಲಿ ೩೪,೨೧೯ ಮತಗಟ್ಟೆಗಳು ಬರಲಿವೆ. ಒಂದೊಂದು ಮತಗಟ್ಟೆಯಲ್ಲಿ ೮೮೩ ಮತದಾರರು ಮತ ಚಲಾಯಿಸಬಹುದು.
ಚುನಾವಣಾ ಬಿಸಿ
ರಾಜ್ಯ ವಿಧಾನಸಭಾ ಚುನಾವಣೆ ಆಡಳಿತಾರೂಢ ಬಿಜೆಪಿ, ವಿರೋಧ ಪಕ್ಷವಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ಅಗ್ನಿ ಪರೀಕ್ಷೆಯಾಗಿದ್ದು, ಬಿಜೆಪಿ ಮತ್ತೆ ಶತಾಯ-ಗತಾಯ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯುವ ಉಮೇದಿನಲ್ಲಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳೂ ಸಹ ಬಿಜೆಪಿಗೆ ಸಡ್ಡು ಹೊಡೆದು ಅಧಿಕಾರದ ಗದ್ದುಗೆಗೇರುವ ಹವಣಿಕೆಯಲ್ಲಿದೆ. ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಗೆ ದಕ್ಷಿಣ ಭಾರತದ ರಾಜ್ಯದಲ್ಲಿ ನಡೆಯುತ್ತಿರುವ ಈ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. ಈ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಇಡೀ ದೇಶಕ್ಕೆ ಬಿಜೆಪಿ ಒಂದು ಸಂದೇಶ ನೀಡುವ ಸನ್ನಾಹದಲ್ಲಿದೆ. ಹಾಗೆಯೇ, ದೇಶದ ಹಲವು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡು ಸಂಕಷ್ಟ ಪರಿಸ್ಥಿತಿಯಲ್ಲಿರುವ ಕಾಂಗ್ರೆಸ್‌ಗೂ ಈ ಚುನಾವಣೆ ಮಹತ್ವದ್ದಾಗಿದ್ದು, ಕರ್ನಾಟಕದಲ್ಲಿ ಗೆಲ್ಲುವ ಮೂಲಕ ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಚೈತನ್ಯ ತುಂಬಬಹುದು ಎಂಬ ಆಶಯ ಕಾಂಗ್ರೆಸ್ ನಾಯಕರದ್ದಾಗಿದೆ.ರಾಜ್ಯದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಜೆಡಿಎಸ್ ಪಕ್ಷಕ್ಕೆ ಈ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವುದು ಅನಿವಾರ್ಯವಾಗಿದೆ. ಸಂಪೂರ್ಣ ಬಹುಮತ ಗಳಿಸುವಷ್ಟು ಸ್ಥಾನ ಗೆಲ್ಲಬೇಕು ಎಂಬ ಹಠದಲ್ಲಿ ಜೆಡಿಎಸ್ ಇದೆಯಾದರೂ ನೂತನ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವಷ್ಟು ಕ್ಷೇತ್ರಗಳನ್ನು ಗೆಲ್ಲಲು ಜೆಡಿಎಸ್ ಎಲ್ಲ ತಂತ್ರಗಳನ್ನು ರೂಪಿಸಿದೆ.ಚುನಾವಣಾ ಆಯೋಗವು ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕಗಳನ್ನು ಪ್ರಕಟಿಸುವ ಮೊದಲೇ ರಾಜ್ಯದಲ್ಲಿ ಚುನಾವಣಾ ಕಾವು ತಾರಕಕ್ಕೇರಿದ್ದು, ಆಡಳಿತಾರೂಢ ಬಿಜೆಪಿ, ವಿರೋಧ ಪಕ್ಷವಾದ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಯಾತ್ರೆಗಳನ್ನು ನಡೆಸಿ ಜನರ ಮನಗೆಲ್ಲಲು ಕಸರತ್ತು ನಡೆಸಿವೆ.ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಈಗಾಗಲೇ ಪ್ರಕಟಿಸಿದೆ. ಬಿಜೆಪಿ ಇನ್ನೂ ಪಟ್ಟಿ ಪ್ರಕಟಿಸಿಲ್ಲವಾದರೂ ಅಭ್ಯರ್ಥಿಗಳ ಆಯ್ಕೆಯ ಪ್ರಕ್ರಿಯೆಯನ್ನು ನಡೆಸಿದ್ದು, ಏಪ್ರಿಲ್ ಮೊದಲ ವಾರದಲ್ಲಿ ಮೊದಲ ಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆ ಇದೆ.ಚುನಾವಣಾ ಘೋಷಣೆಗೂ ಮುನ್ನವೇ ಬಿಜೆಪಿ ರಾಜ್ಯಾದ್ಯಂತ ಹಲವು ಕಾರ್ಯಕ್ರಮಗಳನ್ನು ಸಂಘಟಿಸಿ ಪ್ರಧಾನಿ ನರೇಂದ್ರಮೋದಿ ಮತ್ತು ಅಮಿತ್ ಶಾರವರ ನೇತೃತ್ವದಲ್ಲಿ ಅನೇಕ ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನಾ ಕಾರ್ಯಕ್ರಮವನ್ನು ಕಳೆದ ಒಂದು ತಿಂಗಳಿನಿಂದ ಬಿಡುವಿಲ್ಲದೆ ನಡೆಸಿತ್ತು. ಹಾಗೆಯೇ,ವಿಜಯಸಂಕಲ್ಪ ಯಾತ್ರೆಯನ್ನೂ ರಾಜ್ಯಾದ್ಯಂತ ಸಂಘಟಿಸಿತ್ತು.ಕಾಂಗ್ರೆಸ್ ಪಕ್ಷ ಸಹ ಪ್ರಜಾಧ್ವನಿ ಯಾತ್ರೆಯ ಮೂಲಕ ರಾಜ್ಯಾದ್ಯಂತ ಪ್ರವಾಸ ನಡೆಸಿ ಸಮಾವೇಶವನ್ನು ಆಯೋಜಿಸಿ ಜನರ ಓಲೈಕೆಗೆ ಮುಂದಾಗಿದೆ. ಇದರ ಜತೆಗೆ ಜೆಡಿಎಸ್ ಪಕ್ಷ ಸಹ ಪಂಚರತ್ನ ರಥಯಾತ್ರೆಯ ಮೂಲಕ ಚುನಾವಣಾ ಪ್ರಚಾರವನ್ನು ನಡೆಸಿದೆ.
ಕಳೆದ ಬಾರಿ ಅತಂತ್ರ ವಿಧಾನಸಭೆ
ಕಳೆದ ೨೦೧೮ರಲ್ಲಿ ಮೇ ೧೨ ರಂದು ಒಂದೇ ಹಂತದಲ್ಲಿ ವಿಧಾನಸಭೆಗೆ ಚುನಾವಣೆಗಳು ನಡೆದು ಮೇ ೧೫ ರಂದು ಫಲಿತಾಂಶ ಪ್ರಕಟವಾಗಿತ್ತು. ಆಡಳಿತಾರೂಢ ಬಿಜೆಪಿ ೧೦೫ ಸ್ಥಾನಗಳೊಂದಿಗೆ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು, ಕಾಂಗ್ರೆಸ್ ೭೬, ಜೆಡಿಎಸ್ ೩೯ ಸ್ಥಾನ ಗೆದ್ದಿತ್ತು. ನಂತರ ಜೆಡಿಎಸ್ ಕಾಂಗ್ರೆಸ್‌ನೊಂದಿಗೆ ಸೇರಿ ಸರ್ಕಾರ ರಚನೆ ಮಾಡಿ, ಜೆಡಿಎಸ್‌ನ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಸಮ್ಮಿಶ್ರ ಸರ್ಕಾರವನ್ನು ಮುನ್ನಡೆಸಿದ್ದರು. ೧೪ ತಿಂಗಳ ನಂತರ ರಾಜ್ಯದ ರಾಜಕೀಯ ಪರಿಸ್ಥಿತಿ ಬದಲಾಗಿ ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ೧೬ ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿ, ಜುಲೈ ೨೦೧೯ ರಂದು ಬಿಜೆಪಿ ಸರ್ಕಾರ ರಚನೆ ಮಾಡಿತ್ತು. ಯಡಿಯೂರಪ್ಪರವರು ಮುಖ್ಯಮಂತ್ರಿಯಾಗಿ ಸರ್ಕಾರವನ್ನು ಮುನ್ನಡೆಸಿದ್ದರು, ಇದಾದ ೨೩ ತಿಂಗಳ ನಂತರ ಬಿಜೆಪಿಯಲ್ಲಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಯಡಿಯೂರಪ್ಪರವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಜುಲೈ ೨೦೨೧ ರಂದು ಬಸವರಾಜ ಬೊಮ್ಮಾಯಿರವರನ್ನು ಮುಖ್ಯಮಂತ್ರಿಯಾಗಿ ನಿಯುಕ್ತಿ ಮಾಡಲಾಗಿತ್ತು.
ಪ್ರಸ್ತುತ ವಿಧಾನಸಭೆಯಲ್ಲಿ ಬಿಜೆಪಿ ೧೨೧ ಸದಸ್ಯರನ್ನು, ಕಾಂಗ್ರೆಸ್ ೭೦ ಮತ್ತು ಜೆಡಿಎಸ್ ೩೦ ಸದಸ್ಯರನ್ನು ಹೊಂದಿದೆ.

ಇದೇ ಮೊದಲ ಬಾರಿಗೆ ೮೦ ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶವನ್ನು ಚುನಾವಣಾ ಆಯೋಗ ಕಲ್ಪಿಸಿದೆ. ೮೦ ವರ್ಷ ಮೇಲ್ಪಟ್ಟವರು ಮತದಾನಕ್ಕೆ ಮತಗಟ್ಟೆಗೆ ಬರುವ ಅಗತ್ಯವಿಲ್ಲ. ಮನೆಯಿಂದಲೇ ಮತ ಚಲಾಯಿಸಲು ಅವಕಾಶ ನೀಡಲಾಗುವುದು ಎಂದು ಚುನಾವಣಾ ಮುಖ್ಯ ಆಯುಕ್ತರು ಪ್ರಕಟಿಸಿದ್ದಾರೆ.
ರಾಜ್ಯದಲ್ಲಿ ೮೦ ವರ್ಷ ಮೀರಿದ ೧೨,೧೫,೧೪೨ ಮತದಾರರಿದ್ದಾರೆ ಎಂದು ಚುನಾವಣಾ ಆಯುಕ್ತರು ಮಾಹಿತಿ ನೀಡಿ ಇವರಿಗೆ ಪೋಸ್ಟರ್ ಮತದಾನದ ಹಕ್ಕನ್ನು ಕಲ್ಪಿಸಲಾಗಿದೆ. ಇದು ಕಡ್ಡಾಯ ಅಲ್ಲ, ಅವರು ಇಚ್ಛೆ ಪಟ್ಟರೆ ಮಾತ್ರ ಮನೆಯಿಂದಲೇ ಪೋಸ್ಟರ್ ಬ್ಯಾಲೆಟ್ ಮೂಲಕ ಮತ ಹಾಕಬಹುದು.

ಚುನಾವಣೆಗೆ ನಾಮಪತ್ರ ಸಲ್ಲಿಕೆ ಏಪ್ರಿಲ್ ೧೩ ರಿಂದ ಆರಂಭ,

ನಾಮಪತ್ರ ಸಲ್ಲಿಕೆಗೆ ಏಪ್ರಿಲ್ ೨೦ ಕಡೆಯ ದಿನ.

ನಾಮಪತ್ರ ಪರಿಶೀಲನೆ ಏಪ್ರಿಲ್ ೨೧

ನಾಮಪತ್ರ ವಾಪಸ್ಸಾತಿ ಕೊನೆಯ ದಿನ ಏಪ್ರಿಲ್ ೨೪

ಮೇ ೧೦ ಮತದಾನ, ಮೇ ೧೩ ಫಲಿತಾಂಶ