ಮೇ.೧೦ರಂದು ಶೇ.೧೦೦ ಪ್ರತಿಶತ ಮತದಾನವಾಗಬೇಕು: ಸಿಇಒ ಶಶಿಧರ ಕುರೇರ

ರಾಯಚೂರು,ಮೇ.೦೧- ಮೇ.೧೦ರಂದು ವಿಧಾನಸಭಾ ಚುನಾವಣೆಯ ಮತದಾನ ಇರುವುದರಿಂದ ಜಿಲ್ಲೆಯ ಪ್ರತಿಯೊಬ್ಬರು ಮತದಾನ ಮಾಡುವ ಮೂಲಕ ಶೇ.೧೦೦ ಪ್ರತಿಶತ ಮತದಾನ ಮಾಡಬೇಕು ಆದ್ದರಿಂದ ಸ್ವೀಪ್ ಸಮಿತಿಯಿಂದ ನಮ್ಮ ನಡೆ ಮತಗಟ್ಟೆಯ ಕಡೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಅವರು ಹೇಳಿದರು.
ಅವರು ಏ.೩೦ರ(ಭಾನುವಾರ) ನಗರಸಭೆ ಕಾರ್ಯಲಯದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿ ಮತಗಟ್ಟೆಗೆ ಚುನಾವಣೆ ಧ್ವಜಾರೋಹಣ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಮತದಾನವೆಂಬುವುದು ಪ್ರಜಾಪ್ರಭುತ್ವದಲ್ಲಿ ಅತಿದೊಡ್ಡ ಹಬ್ಬವಿದ್ದಂತೆ ಪ್ರತಿಯೊಬ್ಬ ಪ್ರಜೆ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡಿದಾಗ ಮಾತ್ರ ಹಬ್ಬಕ್ಕೆ ಕಳೆ ಸಿಕ್ಕಂತಾಗುತ್ತದೆ ಆದ್ದರಿಂದ ಪ್ರತಿಯೊಬ್ಬರು ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡಿ ಪ್ರಜಾಪ್ರಭುತ್ವದ ಹಬ್ಬವನ್ನು ಸಡಗರದಿಂದ ಆಚರಣೆ ಮಾಡಬೇಕೆಂದು ತಿಳಿಸಿದರು.
ಇದೇ ವೇಳೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರು ಮಾತನಾಡಿ, ಜಿಲ್ಲಾ ಸ್ವೀಪ್ ಸಮಿತಿಯಿಂದ ಜಿಲ್ಲೆಯ ಪ್ರತಿಯೊಂದು ಮತಗಟ್ಟೆಯಲ್ಲೂ ಚುನಾವಣೆಯ ಧ್ವಜರೋಹಣ ಮಾಡಲಾಗಿದ್ದು, ಇದರಿಂದ ಮತಗಟ್ಟೆಗಳ ಮಾಃಇತಿ ಜನರಿಗೆ ಸುಲಭವಾಗಿ ತಿಳಿಸಿದಂತಾಗುತ್ತದೆ ಜೊತೆಗೆ ಯಾವುದೇ ವ್ಯಕ್ತಿ ಯಾವುದೇ ಕಾರಣಕ್ಕೂ ಮತದಾನದಿಂದ ಹಿಂದುಳಿಯಬಾರದೆಂಬುವುದು ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಎಂದರು.
ಇದೇ ವೇಳೆ ಹಲಗಿ ಮೇಳ, ಡೊಳ್ಳುಕುಣಿತ, ನಾಟ್ಯಮೇಳ ಸೇರಿದಂತೆ ಇನ್ನಿತರ ಕಲಾತಂಡಗಳಿಂದ ಹಾಗೂ ಸೈಕಲ್ ಜಾಥ, ಹಾಗೂ ಪಾದಯಾತ್ರೆ ಮೂಲಕ ಮತದಾನದ ಕುರಿತು ಜಾಗೃತಿ ಮೂಡಿಸಲಾಯಿತು. ನಂತರ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರು ಮತದಾರರ ಪ್ರತಿಜ್ಞಾವಿಧಿಯನ್ನು ಭೊಧಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಹಾಗೂ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಶಶಿಕಾಂತ ಶಿವಪುರೆ, ಸಹಾಯಕ ಆಯುಕ್ತ ಹಾಗೂ ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ರಜನಿಕಾಂತ ಚೌಹಾಣ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಆಶಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರಬಾಬು, ನಗರಸಭೆ ಪೌರಾಯುಕ್ತ ಕೆ.ಗುರುಲಿಂಗಪ್ಪ, ಜಿಲ್ಲಾ ಶಸ್ತ್ರ ಚಿಕಿತ್ಸಾ ತಜ್ಞ ಡಾ.ವಿಜಯಶಂಕರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಈರೇಶ ನಾಯಕ ಸೇರಿದಂತೆ ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.