
ಕಲಬುರಗಿ,ಮೇ.01: ಮೇ ದಿನವು ಕಾರ್ಮಿಕರು ತಮ್ಮ ಹಕ್ಕು,ಸ್ವಾತಂತ್ರ್ಯ, ಘನತೆ- ಗೌರವಗಳಿಗಾಗಿ ಸೂಕ್ತ ಸೌಲಭ್ಯಗಳಿಗಾಗಿ ವಿರೋಚಿತವಾಗಿ ಹೋರಾಡಿದ ಐತಿಹಾಸಿಕ ದಿನವನ್ನು ಜ್ಞಾನಪಿಸುತ್ತದೆ ಎಂದು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ಕಾರ್ಮಿಕ ಸಂಘಟನೆಯ ಜಿಲ್ಲಾ ಅಧ್ಯಕ್ಷ ವಿ.ಜಿ. ದೇಸಾಯಿ ಅವರು ಹೇಳಿದರು.
ಜಿಲ್ಲಾ ಸಮಿತಿಯಿಂದ ನಗರದಲ್ಲಿ ಸೋಮವಾರ ಜರುಗಿದ ವಿಶ್ವಕಾರ್ಮಿಕ ದಿನಾಚರಣೆ ಸಭೆಯಲ್ಲಿ ಭಾಷಣಕಾರರಾಗಿ ಮಾತನಾಡಿದ ಅವರು, 1889ರಲ್ಲಿ ಅಮೇರಿಕಾದ ಚಿಕಾಗೋ ನಗರದಲ್ಲಿ ತಮ್ಮ ಶೋಷಣೆಯ ವಿರುದ್ಧ ಕಾರ್ಮಿಕರು ಧ್ವನಿ ಎತ್ತಿದರು. ನೂರಾರು ಕಾರ್ಮಿಕರು ಈ ಹೋರಾಟದಲ್ಲಿ ಜೀವ ತೆತ್ತು ಕೆಲವು ಹಕ್ಕು ಹಾಗೂ ಸೌಲಭ್ಯಗಳನ್ನು ಪಡೆದುಕೊಂಡರು. ಆದರೆ ದುಡಿಯುವ ವರ್ಗದ ಸ್ಥಿತಿ ಇಂದು ಮತ್ತೆ ಶೋಚನೀಯವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಆಳ್ವಿಕೆಯಲ್ಲಿ ಬರುವ ಎಲ್ಲ ಪಕ್ಷಗಳಂತೆ ಕೇಂದ್ರ ಬಿಜೆಪಿ ಸರ್ಕಾರವು ಸಹ ಕಾರ್ಮಿಕ ವಿರೋಧಿ ನಿಲುವನ್ನು ಹೊಂದಿದ್ದು ಇತ್ತಿಚೆಗೆ ಕಾರ್ಮಿಕರ ಕಾನೂನು ಗಳಲ್ಲಿ ತಿದ್ದುಪಡಿ ಮಾಡಿ ಮಾಲಿಕರ ವಿರುದ್ಧ ಹೋರಾಟ ಮಾಡುವ,ಪ್ರಶ್ನೆ ಮಾಡುವ ಹಕ್ಕು ಗಳನ್ನು ಕಿತ್ತುಕೊಳ್ಳಲಾಗಿದೆ. ಕಾಯಂ ಹುದ್ದೆಗಳನ್ನು ತೆಗೆದು ಹಾಕಿ ಎಲ್ಲಾ ಕ್ಷೇತ್ರಗಳಲ್ಲಿಯು ಗುತ್ತಿಗೆ ಪದ್ದತಿಯನ್ನು ಜಾರಿಗೆ ತಂದು ಕಡಿಮೆ ಸಂಬಳದಲ್ಲಿ ದುಡಿಸಿಕೊಳ್ಳಲಾಗುತ್ತಿದೆ.ಜಾಗತೀಕರಣ, ಖಾಸಗೀಕರಣ ನೀತಿಗಳನ್ನು ಜಾರಿಗೆ ತಂದು ಕಾರ್ಮಿಕರ ಹಿತವನ್ನು ಬಲಿಕೊಡಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ದಿನೇ ದಿನೇ ದುಡಿಯುವ ವರ್ಗದ ಸಮಸ್ಯೆ ಗಳು ಹೆಚ್ಚುತಿದ್ದು ಬಡತನ,ಬೆಲೆ ಏರಿಕೆ, ನಿರುದ್ಯೋಗ, ಭ್ರμÁ್ಟಚಾರಗಳಿಂದಾಗಿ ಜನ ಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಹತಾಶರಾಗುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಜಾತಿ, ಮತ, ಧರ್ಮದ ಆಧಾರದಲ್ಲಿ ವಿಭಜಿಸಿ ಅವರ ಒಗ್ಗಟ್ಟನ್ನು ಮುರಿಯಲಾಗುತ್ತದೆ. ಆದ್ದರಿಂದ ಇದೆಲ್ಲವನ್ನೂ ಮೀರಿ ಕಾರ್ಮಿಕ ವರ್ಗ ಸೂಕ್ತ ವೇದಿಕೆಯಲ್ಲಿ ಸಂಘಟಿತರಾಗಿ ತಮ್ಮ ಬದುಕನ್ನು ಬದಲಾಯಿಸಿಕೊಳ್ಳಲು, ಸಮಾಜದ ಬದಲಾವಣೆಗಾಗಿ ಹೋರಾಟ ಬೆಳೆಸಬೇಕೆಂದು ಅವರು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಆಶಾ ಸಂಘಟನಾಕಾರರಾದ ಕಾ. ರಾಧಾ ಅವರು ಮಾತನಾಡಿ, ದುಡಿಯುವ ಮಹಿಳೆಯರು ಇಂದು ಸಹ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಮಾನ ಕೆಲಸಕ್ಕೆ ಸಮಾನ ವೇತನವಿಲ್ಲ. ಅವರಿಗೆ ಸೂಕ್ತ ಸೌಲಭ್ಯ ಭದ್ರತೆಗಳಿಲ್ಲ. ಆಶಾ, ಅಂಗನವಾಡಿ, ಬಿಸಿ ಊಟದ ಕಾರ್ಯಕರ್ತೆಯರು ಹಲವಾರು ವರ್ಷಗಳಿಂದ ದುಡಿಯುತ್ತಿದ್ದಾರೆ. ಆದರೂ ಇವರನ್ನು ಕಾರ್ಮಿಕರು, ಸರ್ಕಾರಿ ನೌಕರರು ಎಂದು ಪರಿಗಣಸದೇ ಸ್ಕೀಮ್ ವರ್ಕರ್ ಹೆಸರಲ್ಲಿ ಕಡಿಮೆ ಸಂಬಳದಲ್ಲಿ ದುಡಿಸಿಕೊಳ್ಳಲಾಗುತ್ತದೆ. ಸರ್ಕಾರಗಳ ಈ ನೀತಿಯ ವಿರುದ್ಧ ಮಹಿಳಾ ಕಾರ್ಮಿಕರು ಧ್ವನಿ ಎತ್ತಬೇಕೆಂದರು.
ಆಶಾ ಸಂಘಟನೆಯ ತಾಲ್ಲೂಕು ಅಧ್ಯಕ್ಷೆ ಶಿವಲಿಂಗಮ್ಮ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲ್ಲೂಕು ಕಾರ್ಯದರ್ಶಿ ಜಯಶ್ರೀ ಅವರು ಕಾರ್ಯಕ್ರಮ ನಿರೂಪಿಸಿದರು. ನಗರ ಸಂಚಾಲಕಿ ಮಲ್ಲಮ್ಮ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು.